ರಾಜಕೀಯ

ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿ ತಿರುಕನ ಕನಸು: ಶರಣ ಪ್ರಕಾಶ್ ಪಾಟೀಲ್

Shilpa D

ಕಲಬುರಗಿ: ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವುದಾಗಿ ಬಿಜೆಪಿ ತಿರುಕನ ಕನಸು ಕಾಣುತ್ತಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ. 

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ನ ಕೆಲ ಸದಸ್ಯರನ್ನು ಖರೀದಿಸುತ್ತೇವೆ, ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಅವರ ತಿರುಕನ ಕನಸು. ಈಗಾಗಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಯೇ ಪಾಲಿಕೆ ಚುಕ್ಕಾಣಿ ಹಿಡಿಯುವುದು ಖಾತ್ರಿಯಾಗಿದೆ’ ಎಂದು ಹೇಳಿದರು. 

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಈಗಾಗಲೇ ಮಾತನಾಡಿದ್ದಾರೆ. ಎರಡೂ ಪಕ್ಷಗಳ ಮಧ್ಯೆ ಮೈತ್ರಿ ನಿಯಮಗಳ ಚರ್ಚೆ ನಡೆದಿದೆ. ಅದು ಮುಗಿದ ಬಳಿಕ ಮೇಯರ್, ಉಪಮೇಯರ್‌ ಯಾರಿಗೆ ಎಂಬುದು ಗೊತ್ತಾಗಲಿದೆ. ಬಿಜೆಪಿ ಮುಖಂಡರು ವಿನಾಕಾರಣ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ರಾಜಕೀಯದ ಕನಿಷ್ಠ ಜ್ಞಾನವೂ ಇಲ್ಲ. ಮಕ್ಕಳಿಗೆ ಇರುವಷ್ಟು ಅಂಕಿ–ಸಂಖ್ಯೆಗಳ ಅರಿವೂ ಅವರಿಗೆ ಇಲ್ಲ. 55 ಸ್ಥಾನಗಳ ಪೈಕಿ ಕಾಂಗ್ರೆಸ್‌ 27 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿದೆ. ಕೇವಲ 23 ಸ್ಥಾನ ಗೆದ್ದ ಬಿಜೆಪಿಯನ್ನೇ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

SCROLL FOR NEXT