ರಾಜಕೀಯ

ವಿಧಾನಸಭೆ ಅಧಿವೇಶನದ ನಂತರ ಮೈಷುಗರ್ ಸಕ್ಕರೆ ಕಾರ್ಖಾನೆ ಕುರಿತು ನಿರ್ಧಾರ: ಸಚಿವ ಮುರುಗೇಶ್ ನಿರಾಣಿ

Manjula VN

ಬೆಂಗಳೂರು: ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕೆ ಅಥವಾ ಖಾಸಗಿಗೆ ವಹಿಸಬೇಕೆ ಎಂಬ ಬಗ್ಗೆ ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಮಂಗಳವಾರ ಹೇಳಿದ್ದಾರೆ. 

ವಿಧಾನಪರಿಷತ್‍ನಲ್ಲಿ ಜೆಡಿಎಸ್‍ನ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಪರವಾಗಿ ಉತ್ತರ ನೀಡಿದ ಸಚಿವ ನಿರಾಣಿ ಅವರು, ಸಕಾಲದಲ್ಲಿ ಕಬ್ಬು ಅರೆದು ನಿಗದಿತ ಅವಧಿಯಲ್ಲಿ ಬಾಕಿ ಪಾವತಿಸಬೇಕು. ಒಂದು ವೇಳೆ ಖಾಸಗಿಯವರಿಗೆ ವಹಿಸಿದರು ರೈತರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು. 

ಸದಸ್ಯರು ವಿಷಯ ಪ್ರಸ್ತಾಪಿಸಿ, ಮೈಷುಗರ್ ಏಷ್ಯಾದ ಮೊದಲ ಸಕ್ಕರೆ ಕಾರ್ಖಾನೆ, ಇದರ ಪುನಶ್ಚೇತನಕ್ಕೆ 2008-13ರ ಅವಧಿಯಲ್ಲಿ ಐದು ವರ್ಷಗಳಿಗೆ 250, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 300 ಕೋಟಿ ಸೇರಿ ಒಟ್ಟು ಐದು ನೂರು ಕೋಟಿಯನ್ನು ನೀಡಲಾಗಿದೆ. ಕಾರ್ಖಾನೆ ಇನ್ನೂ 450 ಕೋಟಿ ರೂ. ನಷ್ಟದಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪಿಸಬಹುದು. ಆದರೆ 450 ಕೋಟಿ ರೂ. ನಷ್ಟದಲ್ಲಿರುವ ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವ ಮುನ್ನಾ ಮೈಷುಗರ್ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು ತಜ್ಞರ ಸಮಿತಿ ರಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಈವರೆಗೂ ಸಮಿತಿ ರಚನೆಯಾಗಿಲ್ಲ. ಖಾಸಗಿಯವರಿಗೆ ಒಪ್ಪಿಸದೇ ಸರ್ಕಾರವೇ ಕಾರ್ಖಾನೆ ನಡೆಸಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಗಳನ್ನು ಖಾಸಯವರಿಗೆ ನೀಡಿ ಅದರಿಂದ ಏನೇಲ್ಲಾ ನಷ್ಟವಾಗಿದೆ ಎಂದು ಸರ್ಕಾರಕ್ಕೆ ಗೋತ್ತಿದೆ. ಮೈಷುಗರ್ ವಿಷಯದಲ್ಲಿ ದುಸ್ಸಾಹಸ ಬೇಡ ಎಂದಾಗ, ಸಭಾಪತಿ ಅವರು ಮಧ್ಯ ಪ್ರವೇಶ ಮಾಡಿ, ಮಂಡ್ಯ ಭಾಗದ ಪ್ರತಿಷ್ಠಿತ ಕಾರ್ಖಾನೆಯನ್ನು ಸರ್ಕಾರವೇ ನಡೆಸುವ ಸಂಬಂಧ ಸರ್ಕಾರ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಉತ್ತರ ನೀಡುವಂತೆ ಸೂಚಿಸಿದರು.

ಅಧಿವೇಶನದ ಬಳಿಕ ಮಂಡ್ಯ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿನಿಧಿಗಳ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

SCROLL FOR NEXT