ರಾಜಕೀಯ

ಸಂಬಂಧಿಕರಿಗೆ ನಿಮ್ಹಾನ್ಸ್‌ ನಲ್ಲಿ ವೆಂಟಿಲೇಟರ್ ಬೆಡ್ ಕೊಡಿಸಲು ಆಗುತ್ತಿಲ್ಲ: ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅಳಲು

Manjula VN

ಬೆಂಗಳೂರು: ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪಕ್ಷಾತೀತವಾಗಿ ಶಾಸಕರು ಆಕ್ರೋಶ ತೋಡಿಕೊಂಡ ಘಟನೆಗೆ ಬುಧವಾರ ವಿಧಾನಸಭೆ ಸಾಕ್ಷಿಯಾಯಿತು. 

ಶೂನ್ಯ ವೇಳೆ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಬೆಲೆ ಏರಿಕೆ ಚರ್ಚೆಗೆ ಸ್ಪೀಕರ್‌ ಕಾಗೇರಿ ಸಿದ್ದರಾಮಯ್ಯ ಅವರನ್ನು ಕರೆದರು. ಆಗ ಎದ್ದು ನಿಂತ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ನನ್ನ ವಿಷಯವೊಂದಿತ್ತು ಎಂದು ನೆನಪಿಸಿದರು. ಆಗ ಹೌದೌದು ಎನ್ನುತ್ತ ಅವಕಾಶ ನೀಡಿದರು.

ಬಳಿಕ ಮಾತನಾಡಿದ ಹಾಲಪ್ಪ ಅವರು, ಪಾರ್ಶ್ವವಾಯು ರೋಗಿಗೆ ನಿಮಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿಲ್ಲ ಎಂದು ಆಡಳಿತ ಪಕ್ಷದ ಶಾಸಕ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ಪತ್ನಿಯ ಅಕ್ಕ ಮತ್ತು ಹತ್ತಿರದ ಸಂಬಂಧಿಕರೊಬ್ಬರನ್ನು ವೆಂಟಿಲೇಟರ್ ಬೆಡ್ ಸಿಗದೆ ಕಳೆದುಕೊಂಡಿದ್ದೇನೆಂದು ಗದ್ಗದಿತರಾದರು. 

ಈಗಲೂ ತಮ್ಮ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರಿಗೆ ವೆಂಟಿಲೇಟರ್ ಸಿಗುತ್ತಿಲ್ಲ. ಸಾಗರದಿಂದ ಪಾರ್ಶ್ವವಾಯು ಪೀಡಿತ ವ್ಯಕ್ತಿಯನ್ನು ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ. ಆದರೆ, ಆರೋಗ್ಯ ಇಲಾಖೆ ಆಯುಕ್ತರು, ನಿಮ್ಹಾನ್ಸ್ ನಿರ್ದೇಶಕರು ಮತ್ತು ಆರೋಗ್ಯ ಸಚಿವರಿಗೆ ಮನವಿ ಮಾಡಿದರೂ ವೆಂಟಿಲೇಟರ್ ಹಾಸಿಗೆ ಕೊಡಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಡಾ.‌ಕೆ ಸುಧಾಕರ್,ನಿಮಾನ್ಸ್ ಪ್ರತಿಷ್ಠಿತ ಸಂಸ್ಥೆ. ಈ ಆಸ್ಪತ್ರೆಗೆ ರಾಜ್ಯ ಮಾತ್ರವಲ್ಲ ಇತರ ರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ವೆಂಟಿಲೇಟರ್ ಇಲ್ಲದೆ ಸಮಸ್ಯೆ ಆಗಿದೆ. ಆದರೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ರೋಗಿಯನ್ನು ಸೈಂಟ್ ಜಾನ್ಸ್ ಅಸ್ಪತ್ರೆಗೆ ದಾಖಲು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು. 

ಈ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅತೀ ಹೆಚ್ಚು ವೆಂಟಿಲೇಟರ್ ಇರುವುದು ನಿಮಾನ್ಸ್ ನಲ್ಲಿ. ಕೂಡಲೇ ನಿಮಾನ್ಸ್ ಡೈರೆಕ್ಟರ್ ಜೊತೆ ಮಾತನಾಡಿ ಸಮಸ್ಯೆ ಪರಿಹಾರ ಮಾಡುವ ಭರವಸೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟರು.

SCROLL FOR NEXT