ರಾಜಕೀಯ

ಮೀಸಲಾತಿ ಬೇಡಿಕೆ: ಸದನದ ಬಾವಿಗಿಳಿದು ಇಬ್ಬರು ಬಿಜೆಪಿ ಶಾಸಕರ ಪ್ರತಿಭಟನೆ, ಸರ್ಕಾರಕ್ಕೆ ಮುಜುಗರ

Lingaraj Badiger

ಬೆಂಗಳೂರು: ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ ಬೆಲ್ಲದ್ ಅವರು ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸದನದ ಬಾವಿಗಿಳಿದ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ ಘಟನೆ ಗುರುವಾರ ನಡೆದಿದೆ.

ಪಂಚಮಸಾಲಿ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ನಿಲುವು ಘೋಷಣೆ ಮಾಡಬೇಕು ಮತ್ತು ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ನೀಡಬೇಕು ಎಂದು ಒತ್ತಾಯಿಸಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ ಧರಣಿ ನಡೆಸಿದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಾನೂನು ಸಚಿವರು ವಿಧಾನ ಪರಿಷತ್‌ನಲ್ಲಿರುವ ಕಾರಣ ಅವರು ಸದನಕ್ಕೆ ಬಂದ ಬಳಿಕ ಉತ್ತರ ಕೊಡಿಸುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ ಉತ್ತರಕ್ಕೆ ಸಮಾಧಾನಗೊಳ್ಳದ ಬಸನಗೌಡ ಪಾಟೀಲ್ ಯತ್ನಾಳ್ ಸದನದ ಬಾವಿಗಿಳಿದು ಧರಣಿ ನಡೆಸಿದರು. ಯತ್ನಾಳ್ ಪ್ರತಿಭಟನೆಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಸಹ ಸಾಥ್ ನೀಡಿದರು.

ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದ ಯತ್ನಾಳ್, ಆರು ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರು ತಿಂಗಳೊಳಗೆ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಪರಿಗಣಿಸಿ ಎಲ್ಲಾ ವಿಭಾಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಆ ನೀಡಿದ್ದ ಆರು ತಿಂಗಳ ಗಡುವು ಸೆಪ್ಟೆಂಬರ್ 15 ರಂದೆ ಮುಗಿದಿದೆ ಎಂದರು.

ಎಸ್ ಟಿ ಮೀಸಲಾತಿ ವಿಚಾರವಾಗಿ ಬಿಜೆಪಿ ಶಾಸಕರ ಜೊತೆ ಕಾಂಗ್ರೆಸ್ ಶಾಸಕ ಗಣೇಶ್ ಸದನದ ಬಾವಿಗಿಳಿದು ಧರಣಿಗೆ ಮುಂದಾದರು. ಈ ವೇಳೆ ಮಧ್ಯಪ್ರವೇಶ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಸಿಸಿ ಪಾಟೀಲ್ ಉತ್ತರ ಕೊಡ್ತೀನಿ ಎಂದು ಹೇಳಿದ್ದಾರೆ. ಒಂದೋ ಅವರ ಉತ್ತರ ಕೇಳ್ಬೇಕು. ಈಗ ಸಿಎಂ ಇಲ್ಲ, ಅವರು ಬರುವ ತನಕ‌ ಕಾಯಬೇಕು.‌ ಸದನದ ಸಮಯ ಯಾಕೆ ಹಾಳು ಮಾಡುತ್ತೀರಿ? ಈಗ ಸುಮ್ನೆ ನಿಮ್ಮ ಸ್ಥಳದಲ್ಲಿ ಹೋಗಿ ಕೂತ್ಕೊಳ್ಳಿ ಎಂದು ಹೇಳಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಕಾಗೇರಿ ಸೂಚನೆಯ ಬಳಿಕ ಶಾಸಕರು ಧರಣಿ ವಾಪಸ್ ಪಡೆದು ತಮ್ಮ ಸ್ಥಳಕ್ಕೆ ತೆರಳಿದರು.

SCROLL FOR NEXT