ರಾಜಕೀಯ

ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಟ್ವೀಟ್ ವಾರ್: ಆಗಸ್ಟ್ 15 ರ ನಂತರ ಮಾತನಾಡುತ್ತೇನೆ ಎಂದ ಡಿ ಕೆ ಶಿವಕುಮಾರ್

Sumana Upadhyaya

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಬದಲಾವಣೆ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. ಬಿಜೆಪಿ-ಕಾಂಗ್ರೆಸ್ ಮಧ್ಯೆ ಟ್ವೀಟ್ ವಾರ್ ಆರಂಭವಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನನು ಸುದ್ದಿಗಾರರು ಇಂದು ಪ್ರಶ್ನಿಸಿದಾಗ, ನನ್ನ ಮೂರು ದಿನ ಬಿಟ್ಟುಬಿಡಿ, ಸ್ವಾತಂತ್ರ್ಯದ ಹಬ್ಬ ಆಗಲಿ ಆಮೇಲೆ ಸಿಎಂ ಬದಲಾವಣೆ (CM Change) ವಿಚಾರ ಎಲ್ಲ ಮಾತನಾಡುತ್ತೇನೆ ಎಂದರು.

ಬಿಜೆಪಿಯವರು ಯಾವ ತೀರ್ಮಾನ ಬೇಕಾದರೂ ಮಾಡಿಕೊಳ್ಳಲಿ. ನನ್ನ ಮೂರು ದಿನ ಬಿಟ್ಟುಬಿಡಿ. ಬೇರೆ ಬೇರೆ ನಾಯಕರು ಏನಾದರೂ ಹೇಳಿಕೆ ನೀಡಲಿ. ಸದ್ಯ ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷದ ಸ್ಮರಣೆ ಕಾರ್ಯಕ್ರಮ ಮತ್ತು ಆಜಾದ್ ಕಿ ಅಮೃತ ಮಹೋತ್ಸವ ಕುರಿತು ಪಕ್ಷದ ಕಾಲ್ನಡಿಗೆ, ಜಾಥಾ, ಕಾರ್ಯಕ್ರಮಗಳತ್ತ ನಾವು ಗಮನಹರಿಸಿದ್ದೇವೆ ಎಂದು ಹೇಳಿದರು. 

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಮಾಡಿರುವ ಟ್ವೀಟ್ ನಿನ್ನೆಯಿಂದ ಭಾರೀ ಸದ್ದು ಮಾಡಿದ್ದು ಈ ಕುರಿತು ಬಿಜೆಪಿಯ ಹಲವು ನಾಯಕರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಆದ ಟ್ವೀಟ್ ಬಗ್ಗೆ ಪಕ್ಷದ ಅಧ್ಯಕ್ಷರು, ಹಿರಿಯ ನಾಯಕರಿಗೆ ಮಾಹಿತಿಯೇ ಇರಲಿಲ್ಲವಂತೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದಿಂದ ಟ್ವೀಟ್ ಮಾಡಿದ್ದು ಯಾರು ಎಂದು ಡಿ.ಕೆ ಶಿವಕುಮಾರ್ ಮಾಹಿತಿ ಕೇಳಿದ್ದಾರೆ ಎಂದು ತಿಳಿದುಬಂದಿದೆ. 

ರಾಜಕೀಯ ವಿಚಾರಗಳ ಟ್ವೀಟ್ ಮಾಡುವ ಮುನ್ನ ಅಧ್ಯಕ್ಷರ ಗಮನಕ್ಕೆ ತರುವಂತೆ ಮಾಹಿತಿ ನೀಡಿದರು. ಪಕ್ಷದ ಟ್ವೀಟ್​ಗಳು ಅಧ್ಯಕ್ಷರ ಹೇಳಿಕೆಗೆ ಸಮ. ಹೀಗಾಗಿ ಪ್ರಮುಖ ಟ್ಬೀಟ್ ಪೋಸ್ಟ್ ಮಾಡುವ ಮುನ್ನ ಅಧ್ಯಕ್ಷರ ಗಮನಕ್ಕೆ ತರುವಂತೆ ಸೂಚನೆ ನೀಡಿದರು. ಸಿಎಂ ಬದಲಾವಣೆ ವಿಚಾರದಲ್ಲೂ ಡಿ.ಕೆ ಶಿವಕುಮಾರ್ ಆಗಸ್ಟ್ 15ರ ಬಳಿಕ‌ ಮಾತನಾಡುತ್ತೇನೆ ಎಂದರು. 

SCROLL FOR NEXT