ರಾಜಕೀಯ

'ಸಿದ್ದರಾಮಯ್ಯ ಸಿಎಂ ಆಗಬೇಕು' ಹೇಳಿಕೆಗೆ ವರದಿ ಕೇಳಿದ ಕಟೀಲ್; ಸ್ಪಷ್ಟನೆ ನೀಡಿದ ಶ್ರೀರಾಮುಲು; ಪೇಚಿಗೆ ಸಿಲುಕಿದ ಬಿಜೆಪಿ!

Shilpa D

ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ನೋಡಬೇಕು ಎಂದು ಹೇಳುವ ಮೂಲಕ ಪಕ್ಷವನ್ನು ಮುಜುಗರಕ್ಕೀಡು ಮಾಡಿದ ಬೆನ್ನಲ್ಲೇ ಸಮಾಜ ಕಲ್ಯಾಣ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಂದ ರಾಜ್ಯ ಬಿಜೆಪಿ ಬುಧವಾರ ವಿವರಣೆ ಕೇಳಿದೆ.

ಇನ್ನು ಈ ಹೇಳಿಕೆ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಸಚಿವ ಶ್ರೀರಾಮುಲು ಸ್ಪಷ್ಟೀಕರಣ ನೀಡಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಭೇಟಿಯಾಗಿದ್ದ ವೇಳೆ ತಮ್ಮ ಹೇಳಿಕೆಯಿಂದ ಸೃಷ್ಟಿಯಾದ ಗೊಂದಲದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಹೇಳಿಕೆಯ ಅರ್ಥ ಏನಿತ್ತು ಎಂಬ ಬಗ್ಗೆ ರಾಜ್ಯಾಧ್ಯಕ್ಷರಿಗೆ ವಿವರಣೆ ನೀಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಅರ್ಥದಲ್ಲಿ ನಾನು ಹೇಳಿಲ್ಲ. ಡಿಕೆಶಿ, ಅವರ ನಡುವಿನ ಜಗಳ ನೋಡಿ ನಾನು ಹೇಳಿದ್ದೇನೆ. ನಮ್ಮ ಪಕ್ಷಕ್ಕೆ ಬರಲಿ ಅಂತ ಹೇಳಿದ್ದು ಎಂದು ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮುಲು ಸ್ಪಷ್ಟನೆ ನೀಡಿದ್ದಾರೆ.

ಎಲ್ಲಾ ಸ್ಪಷ್ಟೀಕರಣ ರಾಜ್ಯಾಧ್ಯಕ್ಷರಿಗೆ ಕೊಟ್ಟಿದ್ದೇನೆ. ಮೋದಿ ಬಂದಾಗ ವಿರೋಧ ಮಾಡಿದ್ದವರೂ ಬಿಜೆಪಿಗೆ ಬಂದಿದ್ದಾರೆ. ಹಿಂದುಳಿದ ಜಾತಿಗಳು ಒಂದಾಗಬೇಕು. ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆ ನೋಡಿದ್ರೆ ಕಾಂಗ್ರೆಸ್ ನಲ್ಲಿ ಕಿರಿ ಕಿರಿ ಕಾಣುತ್ತಿದೆ. ಅದನ್ನು ನೋಡಿದರೆ ಮುಂದೊಂದು ದಿನ ಸಿದ್ದರಾಮಯ್ಯ ಬಿಜೆಪಿಗೆ ಬರ್ತಾರೆ ಅನ್ನೋ ಮನೋಭಾವದಿಂದ ಮಾತನಾಡಿದೆ.

ಇತ್ತೀಚಿನ ಬೆಳವಣಿಗೆ ನೋಡಿದರೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯಗೆ ಕಿರಿ ಕಿರಿ ಆಗುತ್ತಿದೆ. ಹೀಗಾಗಿ ಇದನ್ನು ನೋಡಿದರೆ ಅವರು ಮುಂದೊಂದು ದಿನ ಬಿಜೆಪಿಗೆ ಬರುತ್ತಾರೆಂಬ ಮನೋಭಾವದಿಂದ ನಾನು ಹೇಳಿಕೆ ನೀಡಿದೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಜಗಳ ನೋಡಿ ನಮ್ಮ ಪಕ್ಷಕ್ಕೆ ಇಲ್ಲಿಗೆ ಬರಬಹುದು' ಎಂದು ಹೇಳಿದ್ದೇನೆ ಅಷ್ಟೇ' ಎಂದು ವಿವರಿಸಿದರು.

‘ನಾನು ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಹೋಗಲು ವಿಳಂಬವಾದ ಕಾರಣಕ್ಕೆ ಸಿದ್ದರಾಮಯ್ಯ ಆ ಕ್ಷೇತ್ರದಲ್ಲಿ ಅಲ್ಪ ಮತದ ಅಂತರದಲ್ಲಿ ಜಯ ಗಳಿಸಿದರು. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಯಾವುದೇ ಸಂದರ್ಭದಲ್ಲಿ ಯಾರಿಗೋ ಹೆದರಿಕೊಂಡು ರಾಜಕೀಯ ಮಾಡುವ ಜಾಯಮಾನ ನನ್ನದಲ್ಲ' ಎಂದು ಶ್ರೀರಾಮುಲು ವಿವರಿಸಿದರು.

ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಸಚಿವ ಬಿ. ಶ್ರೀರಾಮುಲು ಅವರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದರು.

SCROLL FOR NEXT