ರಾಜಕೀಯ

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ತಪ್ಪು, ಇದು ಚುನಾವಣಾ ವರ್ಷ, ಜಾಗ್ರತೆಯಿಂದ ಮಾತಾಡಬೇಕು: ಆರಗ ಜ್ಞಾನೇಂದ್ರ

Sumana Upadhyaya

ಬೆಂಗಳೂರು: ಕೊಡಗು ಜಿಲ್ಲೆ ಪ್ರವಾಸ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಆರಗ ಜ್ಞಾನೇಂದ್ರ ಇಂದು ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರತಿಕ್ರಿಯಿಸಿದ್ದು, ಕಾರಿಗೆ ಮೊಟ್ಟೆ ಎಸೆದ ಕೃತ್ಯ ತಪ್ಪು ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇದೆ. ಆದರೆ ಕಾನೂನನ್ನು ಕೈಗೆ ತೆಗೆದುಕೊಂಡು ಹಿಂಸಾತ್ಮಕ ಧೋರಣೆ ಹೊಂದುವ ಅಧಿಕಾರ ಯಾರಿಗೂ ಇಲ್ಲ, ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ 9 ಜನರನ್ನು ಬಂಧಿಸಿದ್ದಾರೆ ಎಂದು ಹೇಳಿದರು.

ಸಂಯಮದಿಂದ ಮಾತನಾಡಬೇಕು: ವಿಧಾನಸಭೆ ಚುನಾವಣೆಗೆ ದಿನ ಸಮೀಪಿಸುತ್ತಿದೆ. ಪರಿಸ್ಥಿತಿ ಸೂಕ್ಷ್ಮವಾಗಿದೆ. ಎಲ್ಲರೂ ಸಂಯಮದಿಂದ ಮಾತನಾಡಬೇಕು. ಎಲ್ಲರೂ ಗಡಿದಾಟಿ ಮೀರಿ ಮಾತನಾಡಬಾರದು. ಕಾಂಗ್ರೆಸ್ ಕಾರ್ಯಕರ್ತನೊಬ್ಬ ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋವನ್ನು ಇಳಿಸಿ ಇಂಗ್ಲಿಷರ ಬೂಟ್ ನೆಕ್ಕಿದವನು ಸಾವರ್ಕರ್ ಎಂದು ಹೇಳುತ್ತಾನೆ. ಸಾವರ್ಕರ್ ಫೋಟೋ ಸರ್ಕಲ್ ನಲ್ಲಿ ಹಾಕಿದಾಗ ಸಿದ್ದರಾಮಯ್ಯನವರು ಮುಸ್ಲಿಂ ಏರಿಯಾದಲ್ಲಿ ಏಕೆ ಹಾಕಿದ್ದು ಎನ್ನುತ್ತಾರೆ. ನಮ್ಮ ದೇಶದ ಸಮಗ್ರತೆ, ಏಕತೆಗೆ ಧಕ್ಕೆ ತರುವಂತಹ ಮಾತುಗಳನ್ನು ಆಡಿದರೆ ಜನರು ಆಕ್ರೋಶಗೊಳ್ಳುತ್ತಾರೆ.

ರಾಜಕಾರಣ ಎಲ್ಲರೂ ಮಾಡೋಣ, ಜನರ ಶಾಂತಿಯನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಮಾತನಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

SCROLL FOR NEXT