ರಾಜಕೀಯ

ಸಿದ್ದು ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ: ಗೃಹ ಸಚಿವರ ರಾಜೀನಾಮೆಗೆ ಆರ್ ಧ್ರುವ ನಾರಾಯಣ್ ಆಗ್ರಹ

Nagaraja AB

ಮೈಸೂರು: ಕೊಡಗಿನಲ್ಲಿ ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧ ನೈತಿಕ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದು ಸರ್ಕಾರಿ ಪ್ರಾಯೋಜಿತ ಕೃತ್ಯ. ಸಿದ್ದರಾಮಯ್ಯ ಮಾಸ್ ಲೀಡರ್. ಅದಕ್ಕಾಗಿಯೇ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಕರ್ತರನ್ನು ಬಂಧಿಸಬಹುದಿತ್ತು. ಆದರೆ, ಉದ್ದೇಶಪೂರ್ವಕವಾಗಿಯೇ ಸಿದ್ದರಾಮಯ್ಯ ಅವರನ್ನು ಗುರಿ ಮಾಡಲಾಗಿದೆ ಎಂದರು.  

ಕೊಡಗಿನಲ್ಲಿ ಈ ಹಿಂದೆ ಮನೆಗೊಬ್ಬರು ಸೈನಿಕರಿರುತ್ತಿದ್ದರು. ಆದರೆ, ಈಗ ಮನೆಗೊಬ್ಬರು ಪುಂಡರಿದ್ದಾರೆ. ಸಿದ್ದರಾಮಯ್ಯ ಅವರ ಕಾರಿನ ಮೇಲಿನ ಮೊಟ್ಟೆ ಎಸೆತ ಪ್ರಕರಣ ಖಂಡಿಸಿ ಆಗಸ್ಟ್ 26 ರಂದು ಕಾಂಗ್ರೆಸ್ ಚಲೋ ನಡೆಸಲಾಗುವುದು ಎಂದು ಧ್ರುವನಾರಾಯಣ್ ತಿಳಿಸಿದರು. 

ಮತ್ತೊಂದೆಡೆ ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದ್ದು,  ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. 

SCROLL FOR NEXT