ರಾಜಕೀಯ

ದೆಹಲಿಗೆ ಹೊರಟ ಬಿ ಎಸ್ ಯಡಿಯೂರಪ್ಪ: ಕುತೂಹಲ ಮೂಡಿಸಿದ ಭೇಟಿ, ಇಂದು ಸಂಜೆ ಪ್ರಧಾನಿ ಮೋದಿ ಜೊತೆ ಮಾತುಕತೆ

Sumana Upadhyaya

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಬಿಜೆಪಿಯಲ್ಲಿ ಅಗ್ರಸ್ಥಾನಮಾನವನ್ನು ಹೈಕಮಾಂಡ್ ನೀಡಿದ ನಂತರ ಮೊದಲ ಬಾರಿಗೆ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಬೆಂಗಳೂರಿನ ತಮ್ಮ ಕಾವೇರಿ ನಿವಾಸದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದೆಹಲಿಗೆ ಯಡಿಯೂರಪ್ಪನವರು ಪ್ರಯಾಣ ಬೆಳೆಸಿದ್ದಾರೆ. ಇಂದು ಮತ್ತು ನಾಳೆ ಅವರು ದೆಹಲಿಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ.

ತಮ್ಮ ಪ್ರಯಾಣದ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ ಎಸ್ ಯಡಿಯೂರಪ್ಪ, ಈಗ ದೆಹಲಿಗೆ ಹೋಗುತ್ತಿದ್ದು ಸಂಜೆ ಪ್ರಧಾನಿ ಮೋದಿ ಸೇರಿದಂತೆ ಬೇರೆ ನಾಯಕರನ್ನು ಭೇಟಿ ಮಾಡುತ್ತೇನೆ, ನಾಳೆ ಸಾಯಂಕಾಲದವರೆಗೂ ಅಲ್ಲಿದ್ದು ಮುಂದೆ ಏನು ಕೆಲಸ ಮಾಡಬೇಕೆಂದು ಸಲಹೆ ಕೇಳುತ್ತೇನೆ, ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಸರ್ಕಾರಿಯ ವಾಹಕ ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆಯವರನ್ನು ಕೂಡ ಭೇಟಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕುತೂಹಲ ಕೆರಳಿಸಿದ ಭೇಟಿ: ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿಯವರನ್ನು ಯಡಿಯೂರಪ್ಪನವರು ಭೇಟಿ ಮಾಡುತ್ತಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ. ಸರ್ಕಾರದ ಮೇಲೆ 40% ಕಮಿಷನ್ ಆರೋಪ, ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೋಮು ದಳ್ಳುರಿ, ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ಪ್ರತಿಪಕ್ಷಗಳ ವಾಗ್ಯುದ್ಧ, ಚುನಾವಣಾ ಹೊಸ್ತಿಲು, ಸಚಿವ ಸಂಪುಟ ವಿಸ್ತರಣೆ, ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಊಹಾಪೋಹಗಳ ಮಧ್ಯೆ ಯಡಿಯೂರಪ್ಪನವರ ದೆಹಲಿ ಭೇಟಿ ಮಹತ್ವ ಪಡೆದಿದೆ.

SCROLL FOR NEXT