ರಾಜಕೀಯ

ಕಾಂಗ್ರೆಸ್ ನಿಂದ ಭಾರತ್ ಜೋಡೋ ಯಾತ್ರೆ: ನಾಳೆಯಿಂದ ಎರಡು ದಿನ ಬೆಂಗಳೂರಿನಲ್ಲಿ ನಾಯಕರಿಂದ ಸರಣಿ ಸಭೆ

Sumana Upadhyaya

ಬೆಂಗಳೂರು: ಕಾಂಗ್ರೆಸ್ ನಲ್ಲೀಗ ಭಾರತ್ ಜೋಡೋ (Bharat Jodo) ಯಾತ್ರೆಯ ಸಿದ್ಧತೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ, 2023ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮತ್ತು ಇತರ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಕಾಂಗ್ರೆಸ್ ನಾಯಕರು ನಾಳೆ ಮತ್ತು ನಾಡಿದ್ದು ಬೆಂಗಳೂರಿನಲ್ಲಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ. 

ಕಾಂಗ್ರೆಸ್‌ನ ಹಿರಿಯ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲಾ, ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್, ಸಿದ್ದರಾಮಯ್ಯ, ಪಕ್ಷದ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು, 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಅಭ್ಯರ್ಥಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗುವ ರಾಜ್ಯ ವಿಧಾನಮಂಡಲ ಅಧಿವೇಶನದ ಪಕ್ಷದ ಕಾರ್ಯತಂತ್ರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳು ಮತ್ತು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳನ್ನು ಪಕ್ಷವು ಕಲಾಪದಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ಮುಂದಿನ ವಾರ ಗಣೇಶ ಹಬ್ಬಕ್ಕೆ ವಿನಾಯಕ ದಾಮೋದರ ಸಾವರ್ಕರ್ ಅವರ ಪೋಸ್ಟರ್ ಹಂಚಿದ್ದಕ್ಕೆ ಬಿಜೆಪಿ ವಿರುದ್ಧ ಶಿವಕುಮಾರ್ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಭಿವೃದ್ಧಿಯ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಸಮಾಜವನ್ನು ವಿಭಜಿಸಲು ಅವರು ಇಂತಹ ವಿಷಯಗಳನ್ನು ಅವಲಂಬಿಸಿದ್ದಾರೆ. ಸಾವರ್ಕರ್ ಮತ್ತು ಗಣೇಶ ಹಬ್ಬಕ್ಕೂ ಏನು ಸಂಬಂಧ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

SCROLL FOR NEXT