ರಾಜಕೀಯ

ಕುಮಾರಸ್ವಾಮಿ ಗ್ರಹಬಲ ನೋಡಿದ್ರೆ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಾರೆ; ಅವರು ಮುಂದಿನ ಸಿಎಂ ಆಗುವುದು ನಿಶ್ಚಿತ: ಸಿ.ಎಂ ಇಬ್ರಾಹಿಂ

Sumana Upadhyaya

ಹುಬ್ಬಳ್ಳಿ: ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಬಸವರಾಜ ಬೊಮ್ಮಾಯಿಗೆ ಸ್ವಾತಂತ್ರ್ಯವಿಲ್ಲ, ಕೇಶವಕೃಪದಲ್ಲಿ ಹೇಳಿದಷ್ಟು ಕೆಲಸವನ್ನು ಮಾತ್ರ ಬೊಮ್ಮಾಯಿ ಮಾಡುತ್ತಿದ್ದಾರೆ ಹೊರತು ಬೊಮ್ಮಾಯಿಯವರಿಗೆ ಸ್ವತಂತ್ರವಾಗಿ ಕೆಲಸ ಮಾಡುವ ಸ್ವಾತಂತ್ರ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿಯವರು ರೌಡಿಗಳಿಗೆ ಉತ್ತೇಜನ ಮಾಡುತ್ತಾರೆ ಎಂದೆಲ್ಲ ಹೇಳುತ್ತಾರೆ, ಅದು ಸುಳ್ಳು ಅವರನ್ನು ನನಗೆ ಗೊತ್ತು, ನನ್ನ ಸೆಕ್ರೆಟರಿಯಾಗಿದ್ದರು. ಜನತಾದಳ ಅಧ್ಯಕ್ಷನಾಗಿದ್ದಾಗ ಅವರು ನನ್ನ ಸೆಕ್ರೆಟರಿಯಾಗಿ ನನ್ನ ಕೆಳಗೆ ಕೆಲಸ ಮಾಡಿದ್ದವರು. ರೌಡಿಗಳಿಗೆ ಅವರು ಸಹಾಯ ಮಾಡುತ್ತಾರೆ ಎನ್ನುವುದು ಸುಳ್ಳು, ಬಿಜೆಪಿಯಲ್ಲಿ ಅವರು ಅಸಹಾಯಕರಾಗಿದ್ದಾರೆ ಎಂದರು.

ನೂರಕ್ಕೆ ನೂರು ಹೇಳುತ್ತೇನೆ, ಈ ಬಾರಿ ಸರ್ಕಾರ ಬರುವುದು ನಮ್ಮ ಜಾತ್ಯತೀತ ಜನತಾದಳ ಪಕ್ಷ.  ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಉಪ ಮುಖ್ಯಮಂತ್ರಿಯಾಗುವುದಿದ್ದರೆ ನಮ್ಮಲ್ಲಿ ದಲಿತರು, ಮುಸ್ಲಿಮರು, ಲಿಂಗಾಯತರು, ಹಿಂದುಳಿದ ವರ್ಗಗಳ ಮುಖಂಡರಿಗೆ, ಮಹಿಳೆಯರಿಗೆ ಪ್ರಾಶಸ್ತ್ಯ ನೀಡುತ್ತೇವೆ. ಬಿಜೆಪಿಯವರಿಗೆ 60ರಿಂದ 65 ಸೀಟಿಗಿಂತ ಹೆಚ್ಚು ಬರುವುದಿಲ್ಲ ಎಂದರು.

ಕುಮಾರಸ್ವಾಮಿಯವರ ಗ್ರಹಬಲದ ಪ್ರಕಾರ ಅವರು ಕೇಂದ್ರದಲ್ಲಿ ಕೂಡ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ನಮ್ಮ ಗುರಿ ಕೇವಲ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ಮಾತ್ರವಲ್ಲ. ಸಂಸತ್ತಿನಲ್ಲಿ 18 ಸೀಟು ತಲುಪಲು ನಾವು ಗುರಿ ಹೊಂದಿದ್ದೇವೆ. ತೆಲಂಗಾಣ, ತಮಿಳು ನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ಈ ಪಂಚರಾಜ್ಯಗಳ ಮುಖ್ಯಮಂತ್ರಿಗಳು ಒಂದಾದರೆ 100 ಸೀಟು ಹತ್ತಿರ ಸಂಸತ್ತಿನಲ್ಲಿ ಬರುತ್ತವೆ. ಆಗ ಬಿಜೆಪಿ, ಕಾಂಗ್ರೆಸ್ ಮೂಲೆಗುಂಪು ಆಗುತ್ತವೆ.

ಉತ್ತರದಲ್ಲಿ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿಯವರು, ಮುಲಾಯಂ ಸಿಂಗ್ ಯಾದವ್ ಅವರ ಮಗ ಅಖಿಲೇಶ್ ಯಾದವ್, ಲಾಲೂ ಪ್ರಸಾದ್ ಯಾದವ್ ಮಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ಸೇತರ, ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುವ ಅವಕಾಶಗಳು ಹೆಚ್ಚಾಗಿವೆ, ಅಂತಹ ಸಮಯದಲ್ಲಿ ಕುಮಾರಸ್ವಾಮಿಯವರು ಕೇಂದ್ರದಲ್ಲಿ ಅಧಿಕಾರ ವಹಿಸುವುದು ಖಂಡಿತ ಎಂದು ಸಿ ಎಂ ಇಬ್ರಾಹಿಂ ಹೇಳಿದರು.

SCROLL FOR NEXT