ರಾಜಕೀಯ

ಆಪ್ತ ಗೆಳೆಯರಂತಿದ್ದ ಶ್ರೀ ರಾಮುಲು- ಜನಾರ್ದನ ರೆಡ್ಡಿ ನಡುವೆ ವೈಮನಸ್ಸು?

Manjula VN

ಬಳ್ಳಾರಿ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಣಿ ಉದ್ಯಮಿ ಗಾಲಿ ಜನಾರ್ದನರೆಡ್ಡಿ ಅವರ ಕುಟುಂಬದ ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಗೈರುಹಾಜರಾಗಿದ್ದು, ಈ ಬೆಳವಣಿಗೆಯು ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಗುಸುಗುಸುಗಳು ಶುರುವಾಗಿದೆ.

ಆದರೆ, ಶ್ರೀರಾಮುಲು ಅವರು ಪೂರ್ವ ನಿಗದಿತ ಕೆಲಸದ ಮೇಲೆ ಜೈಪುರದಲ್ಲಿರುವ ಕಾರಣ ರೆಡ್ಡಿ ಅವರ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕುತೂಹಲಕಾರಿ ವಿಚಾರವೆಂದರೆ, ರೆಡ್ಡಿ ಇತ್ತೀಚೆಗೆ ತಮ್ಮ ರಾಜಕೀಯ ನಡೆ ಕುರಿತು ಶೀಘ್ರದಲ್ಲೇ ತಿಳಿಸುವುದಾಗಿ ಘೋಷಿಸಿದ್ದರು. ಈ ವೇಳೆ ಶ್ರೀರಾಮುಲು ಅವರೊಂದಿಗೆ ಇರಲಿಲ್ಲ.

ಗಾಲಿ ಜನಾರ್ಧನ ರೆಡ್ಡಿಯವರ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ನ್ಯಾಯಾಲಯದ ಅನುಮತಿ ಇಲ್ಲದೆ ಅವರು ಜಿಲ್ಲೆ ಪ್ರವೇಶಿಸುವಂತಿಲ್ಲ. ಬಿಜೆಪಿ ಕೂಡ ಇವರಿಂದ ದೂರ ಸರಿಯುತ್ತಿದೆ. ಈ ಬೆಳವಣಿಗೆಗಳು ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಭಿನ್ನಾಭಿಪ್ರಾಯ ಮೂಡಿಸಿದೆ ಎಂದು ಹೇಳಲಾಗುತ್ತಿದೆ.

ಆದರೆ, ಶ್ರೀರಾಮುಲು ಅವರು ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದ ದಿನದಂದು ಕೆಲವು ಪ್ರಮುಖ ಕೆಲಸಗಳಿಗಾಗಿ ಜೈಪುರದಲ್ಲಿದ್ದೆ. ಹೀಗಾಗಿ ಸಮಾರಂಭಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ನನ್ನ ಮತ್ತು ರೆಡ್ಡಿ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುತ್ತಿರುವುದು ಕೇವಲ ಮಾಧ್ಯಮಗಳು. ಸುಪ್ರೀಂ ಕೋರ್ಟ್ ಆದೇಶದ ಕಾರಣ ರೆಡ್ಡಿ ಸದ್ಯ ಬಳ್ಳಾರಿಯಲ್ಲಿಲ್ಲ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಶುಭ ಹಾರೈಸುತ್ತೇನೆ, ”ಎಂದು ತಿಳಿಸಿದ್ದಾರೆ.

SCROLL FOR NEXT