ರಾಜಕೀಯ

ನಾನು ಹಿಂದೂ ಹುಲಿನೇ, ಮುಲ್ಲಾ ಎಂದು ಕರೆಯೋಕ್ಕಾಗಲ್ಲ: ಸಿ.ಟಿ ರವಿ

Manjula VN

ಗದಗ: ನನ್ನನ್ನು ಮುಲ್ಲಾ ಎಂದು ಕರೆಯೋಕ್ಕಾಗಲ್ಲ, ಹಿಂದೂ ಹುಲಿ ಎಂದೇ ಕರೆಯಬೇಕು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಬುಧವಾರ ಹೇಳಿದ್ದಾರೆ.

ದತ್ತಜಯಂತಿ ಹಿನ್ನೆಲೆಯಲ್ಲಿ ಶಾಸಕ ಸಿ.ಟಿ.ರವಿ ಅವರು ಮನೆ ಮನೆಗೆ ತೆರಳಿ ಇಂದು ಭಿಕ್ಷಾಟನೆ ಆರಂಭಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರನ್ನು ಹಾಕಿ ಕಾಂಗ್ರೆಸ್ ಟ್ವೀಟ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ದರೆ ಕಾಂಗ್ರೆಸ್​​ನವರು ಖಂಡಿತ ಕರೆಯಲಿ. ನನ್ನ ಸ್ವಭಾವ ಕುಂಕುಮ ಕಂಡರೆ ಆಗದಿದ್ದರೆ, ಕೇಸರಿ ನೋಡಿದರೆ ಆಗದಿದ್ದರೆ, ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ದರೆ ಖಂಡಿತ ಕರೆಯಬಹುದು. ನನ್ನ ಮುಲ್ಲಾ ಅಂತ ಕರೆಯೊಕ್ಕಾಗಲ್ಲ, ಹಿಂದೂ ಹುಲಿ ಅಂತಾನೇ ಕರೆಯಬೇಕು. ನನ್ನ ಮುಲ್ಲಾ ಎಂದು ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ನಮಗೆ ಬರುತ್ತದೆ. ಪರ್ಷಿಯನ್ ಭಾಷೆಯನ್ನ ಆಡಳಿತ ಭಾಷೆಯನ್ನಾಗಿ ಮಾಡಿದವನನ್ನ ಕನ್ನಡ ಪ್ರೇಮಿ ಅಂತ ಹೇಳಕ್ಕಾಗುತ್ತಾ ಎಂದು ಪ್ರಶ್ನೆ ಮಾಡಿದರು.

ಮುಲ್ಲಾ ಅನ್ನೋ ಹೆಸರು ಯಾರಿಗೆ ಕನೆಕ್ಟ್ ಆಗುತ್ತೆ ಎಂದರೆ, ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಅನ್ನೋರಿಗೆ ಕನೆಕ್ಟ್ ಆಗುತ್ತದೆ. ಬೆಂಕಿ ಹಾಕಿದರೂ ಕೂಡ ಅಮಾಯಕರು ಅನ್ನೋರಿಗೆ ಕನೆಕ್ಟ್ ಆಗುತ್ತೆ. ಕೇಸರಿ, ಕುಂಕುಮವನ್ನ ದೂಡಿ ಟೋಪಿಯನ್ನ ಪ್ರೀತಿಯಿಂದ ಹಾಕಿಕೊಳ್ಳುವವರಿಗೆ ಕನೆಕ್ಟ್ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಕುಟುಕಿದರು.

ಇದೇ ವೇಳೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ ಪ್ರತಿಕ್ರಿಯಿಸಿ, ಮಹಾರಾಷ್ಟ್ರದ ವಾಹನ ಅಥವಾ ಕರ್ನಾಟಕದ ವಾಹನಗಳಿಗೆ ಮಸಿ ಬಳಿಯೋದಾಗಲೀ ಬೇರೆದಾಗಲೀ ಮಾಡೋದು ಪ್ರಚೋದನೆ ಮಾಡೋ ಕೆಲಸ ಆಗುತ್ತದೆ. ಆ ರಾಜ್ಯದಲ್ಲಿ ಅವಕಾಶ ಕೊಡಬಾರದು, ಈ ರಾಜ್ಯದಲ್ಲಿ ಇಲ್ಲಿ ಅದಕ್ಕೆ ಅವಕಾಶ ಕೊಡಬಾರದು. ನಾವು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎರಡೂ ರಾಜ್ಯಗಳ ಆಡಳಿತವನ್ನ ನಡೆಸುವರಿಗೆ ಇದೆ ಎಂದರು.

ಈಗಾಗಲೇ ಸಿಎಂ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಇಬ್ಬರೂ ಮಾತಾಡಿದ್ದಾರೆ. ಗಡಿ ವಿವಾದ ಅದನ್ನ ಕಾನೂನಿನಾತ್ಮಕವಾಗಿ ನ್ಯಾಯಾಲಯದ ಮೂಲಕ ಬಗೆಹರಿಸಕೊಳ್ಳೋಣ. ವಿವಾದ ಇರೋದು ಸತ್ಯ, ಅದನ್ನ ಬಗೆಹರಿಸಿಕೊಳ್ಳೋಕೆ ಅವಕಾಶ ಇದೆ. ಇದನ್ನ‌ ಮೀರಿ ನಮ್ಮ ಸಂಬಂಧನೂ‌ ಇದೆ. ಭಾರತೀಯರು ಅನ್ನೋ ಭಾವನೆ ಇಟ್ಟುಕೊಂಡು ನಾವು ಕೆಲಸ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈಗ ಗಡಿಯನ್ನ ಮೀರಿ ಸಂಬಂಧಗಳು ಗಟ್ಟಿಯಾಗುತ್ತಿರುವ ಕಾಲದಲ್ಲಿ ಗಡಿಯ ಗೋಡೆಯನ್ನ ಎತ್ತಿ ಸಂಬಂಧ ಹಾಳು ಮಾಡುವ ಕೆಲಸವನ್ನ ಯಾರೂ ಕೂಡ ಮಾಡಬಾರದು. ಮತ್ತೆ ಕರ್ನಾಟಕದ ವಿಷಯ ಬಂದಾಗ ನೆಲ ಜಲದ ರಕ್ಷಣೆ ಬಗ್ಗೆ ಯಾವತ್ತೂ ಕೂಡಾ ರಾಜಿ ಮಾಡಿಕೊಂಡಿಲ್ಲ. ಹಾಗೆಯೇ ಆ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಂದಾಗಿ ನಮ್ಮ ನಿಲುವನ್ನು ವ್ಯಕ್ತಪಡಿಸಿದ್ದೇವೆ. ಹಾಗೆಯೇ ಸೌಹಾರ್ದಯುತವಾಗಿ ಬಗೆಹರಿಸುವಂತಹ ದಾರಿಯನ್ನು ಹುಡುಕಿ, ಹೊರತು ಸಂಘರ್ಷದ ದಾರಿಯಲ್ಲ ಎಂದು ಹೇಳಿದರು.

SCROLL FOR NEXT