ರಾಜಕೀಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿಗೆ ತರಲು ಕ್ರಮ: ಸಿದ್ದರಾಮಯ್ಯ

Manjula VN

ಬೆಂಗಳೂರು: ದಲಿತ ಉಪಪಂಗಡಳಿಗೆ ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವ ಕುರಿತು ತಾವು ಮುಖ್ಯಮಂತ್ರಿಯಾಗಿದ್ದಾಗ ವಿಫಲರಾಗಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸದಾಶಿವ ಆಯೋಕದ ವರದಿ ಜಾರಿಗೆ ಆಗ್ರಹಿಸಿ ಭಾನುವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ಪೊಲೀಸರ ವಿರುದ್ಧ ಸಿದ್ದರಾಮಯ್ಯ ಅವರು ಸೋಮವಾರ ವಾಗ್ದಾಳಿ ನಡೆಸಿದರು.

ಸದಾಶಿವ ಆಯೋಗದ ವರದಿ ಜಾರಿಗಾಗಿ ಆಗ್ರಹಿಸುತ್ತಿದ್ದ ಕಾರ್ಯಕರ್ತರನ್ನು ಬಿಜೆಪಿ ಸರ್ಕಾರ ಬಂಧಿಸಿದೆ. ನಾನು ಅದನ್ನು ಖಂಡಿಸುತ್ತೇನೆ, ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಜ್ಯ ಸರ್ಕಾರ ಒಂದೋ ಹೋರಾಟಗಾರರ ನ್ಯಾಯಬದ್ಧ ಬೇಡಿಕೆಯನ್ನು ಈಡೇರಿಸಬೇಕು, ಇಲ್ಲವಾದರೆ ಕನಿಷ್ಠ ಅವರನ್ನು ಮಾತುಕತೆಗಾದರೂ ಆಹ್ವಾನಿಸಬೇಕಾಗಿತ್ತು. ಇದ್ಯಾವುದನ್ನು ಮಾಡದೆ ಹೋರಾಟಗಾರರನ್ನು ಪೊಲೀಸರ ಮೂಲಕ ಹಣಿಯಲು ನಡೆಸಿದ ಪ್ರಯತ್ನ ಪ್ರಜಾಪ್ರಭುತ್ವ ವಿರೋಧಿಯಾದುದು. ಒಳಮೀಸಲಾತಿ ಜಾರಿಗೆ ಶಿಫಾರಸು ಮಾಡಿರುವ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ಸರ್ಕಾರ, ಈಗ ಹೋರಾಟಗಾರರನ್ನೇ ಬಂಧಿಸಲು ಹೊರಟಿರುವುದು ವಿಷಾದನೀಯ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆಂದು ತಿಳಿಸಿದ್ದಾರೆ.

ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಡಿ.6ರಂದು ‘ಸಾಂಸ್ಕೃತಿಕ ಪ್ರತಿರೋಧ’ ರ್ಯಾಲಿ ನಡೆಸಿದಾಗ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಗಿತ್ತು.

ಜನವರಿ 8 ರಂದು ಚಿತ್ರದುರ್ಗದಲ್ಲಿ ಎಸ್‌ಸಿ/ಎಸ್‌ಟಿ 'ಐಕ್ಯತಾ ಸಮಾವೇಶ' ನಡೆಸಲು ಉದ್ದೇಶಿಸಿರುವ ಕಾಂಗ್ರೆಸ್, ಈ ಕುರಿತು ಕೆಲ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

2012ರಲ್ಲಿ ಡಿ.ವಿ.ಸದಾನಂದಗೌಡ ಸಿಎಂ ಆಗಿದ್ದಾಗ ಆಯೋಗ ಸದಾಶಿವ ಆಯೋಗ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು.

SCROLL FOR NEXT