ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ವಿಸ್ತೃತ ಮಾರ್ಗಸೂಚಿ ಸಿದ್ಧಪಡಿಸಿರುವ ಕಾಂಗ್ರೆಸ್, ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ತನ್ನ ಸಿದ್ಧತೆಯ ಕುರಿತು ಚರ್ಚೆ ನಡೆಸಿತು.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಈ ವೇಳೆ ಚುನಾವಣೆಯಲ್ಲಿ ಗೆಲ್ಲಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಸಭೆ ಬಳಿಕ ಮಾತನಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ಜನವರಿ ಮಧ್ಯಂತರದಿಂದ ರ‍್ಯಾಲಿಗಳ ನಡೆಸಲು ನಿರ್ಧರಿಸಲಾಗಿದೆ. ಸರಣಿ ರ‍್ಯಾಲಿಗಳ ನಂತರ ಜಂಟಿ ಯಾತ್ರೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: 'ಖಾನ್'ಗ್ರೆಸ್ ಹಣಿಯಲು 'ದಳ'ಪತಿ ತಂತ್ರ; ಸಾಮೂಹಿಕವಾಗಿ 'ಕೈ' ಕೊಟ್ಟು 'ತೆನೆ' ಹಿಡಿದ ಚಾಮರಾಜಪೇಟೆ ಮುಖಂಡರು
ಜಂಟಿ ಯಾತ್ರೆಯ ವೇಳಾಪಟ್ಟಿಯನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಿದ್ಧಪಡಿಸುತ್ತಾರೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ ಜಂಟಿ ಬಸ್ ಯಾತ್ರೆ ನಡೆಯಲಿದ್ದು, 20 ಜಿಲ್ಲಾ ಕೇಂದ್ರಗಳಲ್ಲಿ ಸಂಚರಿಸಲಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಎರಡು ಪ್ರತ್ಯೇಕ ತಂಡಗಳನ್ನು ರಚಿಸುತ್ತೇವೆ, ಒಂದು ನನ್ನ ನೇತೃತ್ವದಲ್ಲಿ ಮತ್ತು ಇನ್ನೊಂದು ಶಿವಕುಮಾರ್ ನೇತೃತ್ವದಲ್ಲಿ, ಉಳಿದ ಕ್ಷೇತ್ರಗಳ ಪ್ರಚಾರಗಳನ್ನು ಇತರೆ ನಾಯಕರು ನೋಡಿಕೊಳ್ಳಲಿದ್ದಾರೆ. ಹೀಗೆಯೇ ಇಡೀ ರಾಜ್ಯದ ಜನರನ್ನು ತಲುಪುತ್ತೇವೆಂದು ತಿಳಿಸಿದರು.
ವಾಸ್ತವವಾಗಿ, ಸಿದ್ದರಾಮಯ್ಯ ಅವರು ಬಸವಕಲ್ಯಾಣದಿಂದ ಪ್ರತ್ಯೇಕ ಯಾತ್ರೆ ನಡೆಸಲು ಮುಂದಾಗಿದ್ದರು. ಇದಕ್ಕೆ ಜನವರಿ 3 ದಿನಾಂಕವನ್ನೂ ನಿಗದಿಪಡಿಸಿದ್ದರು. ಆದರೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಜಂಟಿ ಯಾತ್ರೆಯನ್ನು ಕೈಗೊಳ್ಳುವಂತೆ ಮನವರಿಕೆ ಮಾಡಲಾಯಿತು.
ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಂದರೂ ಕುರ್ಚಿ ಬಿಟ್ಟು ಎದ್ದು ನಿಲ್ಲದ ಸಿದ್ದರಾಮಯ್ಯ: ವಿಡಿಯೋ ವೈರಲ್
ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಈ ಹಿಂದೆ ಯೋಜಿಸಿದ್ದ ಪ್ರತ್ಯೇಕ ಯಾತ್ರೆಗಳು ಚರ್ಚೆಗೆ ಬಂದಿದ್ದು, ಅಂತಿಮವಾಗಿ ಜಂಟಿ ಯಾತ್ರೆಗೆ ಹೋಗಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಭಾಗವಾಗಿದ್ದ ಹಿರಿಯ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.
ಯಾತ್ರೆಗೂ ಮೊದಲು ಅಭ್ಯರ್ಥಿಗಳ ಘೋಷಣೆಗೆ ನಿರ್ಧರಿಸಲಾಗಿದೆ. ಇದಕ್ಕೆ ಪಕ್ಷದ ನಾಯಕರೂ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಜನರ ಪರ ಧ್ವನಿ ಎತ್ತಲು ಮಾರ್ಗಸೂಚಿ ರೂಪಿಸಲಾಗಿದೆ ಎಂದು ಸುರ್ಜೇವಾಲಾ ಅವರು ತಿಳಿಸಿದ್ದಾರೆ.
ಸರಕಾರಗಳು ಜನರಿಗೆ ದ್ರೋಹ ಬಗೆದಿರುವ ಹಿನ್ನೆಲೆಯಲ್ಲಿ ಡಿ.30ರಂದು ವಿಜಯಪುರದಲ್ಲಿ ಕೃಷ್ಣಾ ನದಿ ನೀರಿನ ಸಮಸ್ಯೆ ಪ್ರಸ್ತಾಪಿಸಿ, ಜನವರಿ 2ರಂದು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮಹದಾಯಿ ವಿಚಾರವಾಗಿ ಸರಣಿ ರ್ಯಾಲಿ ನಡೆಸಲಾಗುವುದು ಎಂದರು.
ಮಹದಾಯಿ ಯೋಜನೆ ಮಹತ್ವದ್ದಾಗಿದೆ. ಕಾರ್ಯಗತಗೊಳಿಸಲು ಚಿಂತನೆ ನಡೆಸಲಾಗಿದೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಹೇಗೆ ಎಡವಿದವು ಎಂಬುದನ್ನು ನಾವು ಜನರಿಗೆ ತಿಳಿಸುತ್ತೇವೆ. 40 ಪರ್ಸೆಂಟ್ ಕಮಿಷನ್ ವಿಚಾರ ಹಿಡಿದು ಬೊಮ್ಮಾಯಿ ಸರ್ಕಾರವನ್ನು ಗುರಿಯಾಗಿಸಲಾಗುತ್ತದೆ. ಚಿತ್ರದುರ್ಗದಲ್ಲಿ ಜನವರಿ 8 ರಂದು ಎಸ್‌ಸಿ/ಎಸ್‌ಟಿ ಸಭೆಯ ನಂತರ, ಒಬಿಸಿಗಳಿಗೆ ಇದೇ ರೀತಿಯ ಸಭೆಯನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಧ್ರುವ ನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.