ರಾಜಕೀಯ

ಡಿಸೆಂಬರ್ 15ಕ್ಕೆ ರಾಜ್ಯಕ್ಕೆ ಜೆಪಿ ನಡ್ಡಾ: 10 ಜಿಲ್ಲೆಗಳ ಬಿಜೆಪಿ ನೂತನ ಕಾರ್ಯಾಲಯ ಭವನ ಉದ್ಘಾಟನೆ

Manjula VN

ಬೆಂಗಳೂರು: ರಾಜ್ಯದ 10 ಜಿಲ್ಲೆಗಳ ನೂತನ ಬಿಜೆಪಿ ಕಾರ್ಯಾಲಯ ಭವನಗಳ ಉದ್ಘಾಟನೆ ಹಾಗೂ 3 ಜಿಲ್ಲೆಗಳ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಡಿ.15ರಂದು ನಡೆಯಲಿದೆ ಎಂದು ತಿಳಿದುಬಂದಿದೆ.

ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ರಾಯಚೂರು, ಬೀದರ್ ಸೇರಿದಂತೆ 10 ಜಿಲ್ಲೆಗಳಲ್ಲಿ ಬಿಜೆಪಿ ನೂತನ ಭವನಗಳು ನಿರ್ಮಾಣಗೊಂಡಿದ್ದು, ಈ ಭವನಗಳ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಅವರು ಗುರುವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಕೊಪ್ಪಳದಲ್ಲಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಭವನವನ್ನು ಉದ್ಘಾಟಿಸಲಿದ್ದು, ಉಳಿದ ಭವನವನ್ನು ವರ್ಚುವಲ್ ಮೂಲಕ ಉದ್ಘಾಟನೆ ಮಾಡಲಿದ್ದಾರೆಂದು ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಸಹ ಸಂಚಾಲಕ ಅಮರನಾಥ ಪಾಟೀಲ ಮಾಹಿತಿ ನೀಡಿದ್ದಾರೆ.

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಿಜೆಪಿ ಭವನಗಳ ನಿರ್ಮಾಣ ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಈ ಭವನಗಳಿಂದಲೇ ಚುನಾವಣಾ ಸಿದ್ಧತೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ಉಳಿದ ಜಿಲ್ಲೆಯಲ್ಲಿ ಭೂಮಿ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಲ್ಲಾ ಭವನಗಳು 4-5 ಮಹಡಿಗಳನ್ನು ಹೊಂದಿದ್ದು, 500 ಜನರು ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣವನ್ನು ಹೊಂದಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT