ರಾಜಕೀಯ

ಕುತೂಹಲ ಕೆರಳಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಬಿಎಸ್ ಯಡಿಯೂರಪ್ಪ ಭೇಟಿ

Lingaraj Badiger

ಬೆಂಗಳೂರು: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬುಧವಾರ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಬಿಎಸ್ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಭೇಟಿಯಲ್ಲಿ ಕುತೂಹಲ ಏನಿಲ್ಲ. ಬೆಂಗಳೂರಿಗೆ ಬಂದಾಗ ಭೇಟಿಯಾಗ್ತೇನೆ. ಅವರು ಹಿರಿಯರು, ನಮ್ಮ ಸಮಾಜದ ಮುಖಂಡರು. ಇವತ್ತು ಗುರುಪೂರ್ಣಿಮೆ ಬೇರೆ. ಹಿರಿಯರ ಆಶೀರ್ವಾದ ಪಡೆಯೋಣ ಎಂದು ಬಂದೆ. ಬೇರೆ ರೀತಿ ಏನೂ ಇಲ್ಲ. ಇದೊಂದು ಸೌಹಾರ್ಧಯುತ ಭೇಟಿ. ಅವರ ಮಾರ್ಗದರ್ಶನ ಪಡೆದಿದ್ದೇನೆ. ಅವರ ಜೊತೆ ರಾಜಕಾರಣದ ಚರ್ಚೆ ಮಾಡಿಲ್ಲ. ಅವರಿಗೆ ಗೌರವ ಕೊಡ್ತಾನೇ ಬಂದಿದ್ದೇನೆ ಎಂದು ತಿಳಿಸಿದರು.

ಪಂಚಮಸಾಲಿ ಸಮುದಾಯಕ್ಕೆ ೨-ಎ ಮೀಸಲಾತಿ ಕೊಡಬೇಕು ಎಂಬ ಆಸಕ್ತಿ ಬಿಎಸ್ ವೈ ಗೆ ಇತ್ತು. ಕಾರಣಾಂತರಗಳಿಂದ ಕೊಡಲು ಆಗಲಿಲ್ಲ. ಎಲ್ಲಾ ಅಡೆತಡೆ ನಿವಾರಣೆ ಮಾಡಿ, ಬೇರೆ ಸಮುದಾಯಕ್ಕೆ ತೊಂದರೆಯಾಗದಂತೆ ೨-ಎ ಮೀಸಲಾತಿಯನ್ನ ನೀಡಬೇಕಿದೆ. ಬೊಮ್ಮಾಯಿ ಸಾಹೇಬ್ರು ಮೇಲೆ ಭರವಸೆ ಇದೆ. ಕೊಡ್ತಾರೆಂಬ ಭರವಸೆ ಇದೆ ಎಂದು ಕಾಂಗ್ರೆಸ್ ಶಾಸಕಿ ಹೇಳಿದ್ದಾರೆ.

ಡಿಕೆಶಿ ಉತ್ಸವಕ್ಕೆ ಬೆಂಬಲಿಗರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಉತ್ಸವ ಮಾಡ್ತಾರೆ. ಆ ಕಮಿಟಿಯಲ್ಲಿ ನಾನು ಇದ್ದೇನೆ. ಇವತ್ತು ಸಭೆ ಇದೆ ಭಾಗವಹಿಸ್ತೇನೆ. ಅವರಿಗೆ ೭೫ ವರ್ಷ ತುಂಬಿದೆ. ಮನುಷ್ಯನ ಜೀವನದಲ್ಲಿ ಅದೊಂದು ಸಾರ್ಥಕತೆ. ಅವರು ಉತ್ಸವ ಮಾಡಿ ಎಂದು ಹೇಳಿಲ್ಲ. ನಾವೆಲ್ಲ ಸೇರಿ ಮಾಡ್ತಿದ್ದೇವೆ ಎಂದು ಹೆಬ್ಬಾಳ್ಕರ್ ತಿಳಿಸಿದರು.

SCROLL FOR NEXT