ರಾಜಕೀಯ

'ಕಾಂಗ್ರೆಸ್‌ಗೆ ಆಳಾಗಿ ಬರೆಯುವವರಿಗೆ ಆರೆಸ್ಸೆಸ್‌ನ ಆಳ ಅಗಲ ತಿಳಿಯಲು ಸಾಧ್ಯವಿಲ್ಲ; ರಾಹುಲ್ ಭಾಷಣದಿಂದ ಪ್ರೇರಿತರಾಗಿ  ಕೃತಿ ಬರೆದಂತಿದೆ'

Shilpa D

ಮೈಸೂರು: ಕಾಂಗ್ರೆಸ್‌ನ ಆಳಾಗಿ ದೇವನೂರು ಮಹಾದೇವ ಬರೆದಿರುವ 'ಆರ್​ಎಸ್​ಎಸ್​ ಆಳ-ಅಗಲ' ಕೃತಿಯಲ್ಲ, ಅದೊಂದು ವಿಕೃತಿ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ರಚಿಸಿರುವ ‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ ಎಂಬ ಕೃತಿಯ ಬಗ್ಗೆ ಮಾತನಾಡಿದ ಪ್ರತಾಪ ಸಿಂಹ, ಕಾಂಗ್ರೆಸ್‌ಗೆ ಆಳಾಗಿ ಬರೆಯುವವರಿಗೆ ಆರೆಸ್ಸೆಸ್‌ನ ಆಳ ಅಗಲ ತಿಳಿದುಕೊಳ್ಳಲು ಸಾಧ್ಯವಿಲ್ಲ.

'ಕುಸುಮ ಬಾಲೆ'ಯ ನಂತರ ದೇವನೂರು ಒಂದಿಷ್ಟು ಸೃಜನಶೀಲತೆ ಉಳಿಸಿಕೊಂಡಿದ್ದಾರೆ ಎಂದುಕೊಂಡಿದ್ದೆ. ಆದರೆ, ಆರ್​ಎಸ್​ಎಸ್ ಕುರಿತು ಬರೆಯಲು ಹೋಗಿ ತಮ್ಮ ಘನತೆ ಕಳೆದುಕೊಂಡಿದ್ದಾರೆ ಎಂದರು. ಜೊತೆಗೆ, ರಾಹುಲ್‌ ಗಾಂಧಿ ಭಾಷಣದಿಂದ ಪ್ರೇರಿತರಾಗಿ ಕೃತಿ ಬರೆದಂತಿದೆ ಎಂದು ವ್ಯಂಗ್ಯವಾಡಿದರು.

ಚಾತುರ್ವರ್ಣ ಪದ್ಧತಿ ಬಗ್ಗೆ ಬರೆಯಲು ಹೋಗಿದ್ದಾರೆ ಎಂದ ಪ್ರತಾಪ್ ಸಿಂಹ, ಒಂದು ಧರ್ಮ, ಒಬ್ಬ ನಾಯಕ, ಒಂದು ದೇಶವನ್ನು ಆರ್ ಎಸ್ ಎಸ್ ಪ್ರತಿಪ್ರಾದಿಸುತ್ತದೆ ಎಂದು ಬರೆದಿದ್ದಾರೆ. ಆದರೆ ಒಬ್ಬ ವ್ಯಕ್ತಿ, ಒಂದು ಪುಸ್ತಕ, ಒಂದು ದೇಶದಿಂದ, ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಈ ಬಗ್ಗೆ ದೇವನೂರು ಮಹಾದೇವ ಯಾಕೆ ಮಾತನಾಡಲ್ಲ?

ಚಾತುರ್ವರ್ಣ ಪದ್ಧತಿ ಕೇವಲ ಹಿಂದೂ ಧರ್ಮದಲ್ಲಿಲ್ಲ. ಕ್ರಿಶ್ಚಿಯನ್ ಧರ್ಮದಲ್ಲೂ ಕ್ಯಾಥೊಲಿಕ್ ಪ್ರಾಟಸ್ಟೆಂಟ್, ನೀಗ್ರೋ ಮುಂತಾದ ಪಂಥಗಳಿವೆ. ಇಸ್ಲಾಂ ಧರ್ಮದಲ್ಲೂ ಸುನ್ನಿ, ಷಿಯಾ, ಪಠಾಣ್, ಮೊಗಲ್ ಜಾತಿಗಳಿವೆ. ಚಾತುರ್ವರ್ಣ ವಿರೋಧಿಸುವುದಾದರೆ ಎಲ್ಲಾ ಧರ್ಮಗಳ ಬಗ್ಗೆಯೂ ಮಾತನಾಡಿ ಎಂದು ಆಗ್ರಹಿಸಿದರು.

ಇನ್ನು ಅಂಬಾನಿ, ಅದಾನಿ ಆದಾಯ ಜಾಸ್ತಿಯಾಗಿದೆ, ಬ್ಯಾಂಕ್‌ಗಳ ಸಾಲ ರೈಟ್ ಆಫ್ ಬಗ್ಗೆ ಏನೇನೋ ಬರೆದಿದ್ದಾರೆ ಎಂದ ಪ್ರತಾಪ್ ಸಿಂಹ, ಇವೆಲ್ಲವನ್ನು ಗಮನಿಸಿದರೆ, ಒಬ್ಬ ಕಾಂಗ್ರೆಸ್‌ನ ಕಾರ್ಯಕರ್ತ ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತನಾಗಿ ಬರೆದು ಸಿದ್ದರಾಮಯ್ಯ ಅವರು ದೇವನೂರು ಮಹದೇವ ಜೊತೆ ಮಾತನಾಡಿ ಅವರ ಹೆಸರನ್ನು ಹಾಕಿಸಿದ್ದಾರೆ ಎಂದು ಹೇಳಿದರು.

ಆರ್‌ಎಸ್‌ಎಸ್ ಒಂದು ಧರ್ಮ, ಒಂದು ನಾಯಕ ಮತ್ತು ಒಂದು ರಾಷ್ಟ್ರವನ್ನು ಆಧರಿಸಿದೆ ಎಂದು ಅವರು ಬರೆದಿದ್ದಾರೆ, ಆದರೆ ಒಬ್ಬ ವ್ಯಕ್ತಿ, ಒಂದು ಪುಸ್ತಕ ಮತ್ತು ಒಂದು ದೇಶದಿಂದಾಗಿ ಉಂಟಾಗಿರುವ ಭಯೋತ್ಪಾದನೆಯ ಬಗ್ಗೆ ಏಕೆ ಮೌನವಾಗಿದ್ದಾರೆ? ಎಂದು ಸಂಸದರು ಪ್ರಶ್ನಿಸಿದ್ದಾರೆ.

SCROLL FOR NEXT