ರಾಜಕೀಯ

'ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲ್ಲ; ರಾಜ್ಯಸಭೆ ಸೇರಿ ಯಾವುದೇ ಹುದ್ದೆ ನೀಡಿದರೂ ಸ್ವೀಕರಿಸುವುದಿಲ್ಲ'

Shilpa D

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ನಿಲ್ಲುವ ಪ್ರಶ್ನೆಯೇ ಇಲ್ಲ. ಪಕ್ಷದ ‌ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ‌ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಚಾಮುಂಡೇಶ್ವರಿ, ‌ಇಲವಾಲ ಬ್ಲಾಕ್ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ‌ ಪದಗ್ರಹಣ ಕಾರ್ಯಕ್ರಮದಲ್ಲಿ ‌ಅವರು ಮಾತನಾಡಿದರು.

ಇದು ನನ್ನ ಕೊನೆಯ ಚುನಾವಣೆ, 2023 ನನ್ನ ಕೊನೆಯ ಚುನಾವಣಾ ಯುದ್ಧವಾಗಿದೆ. ನಾನು ರಾಜ್ಯಸಭಾ ಸದಸ್ಯತ್ವ ಸೇರಿದಂತೆ ಯಾವುದೇ ಸ್ಥಾನಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ ವಿರುದ್ಧ ಸೋತಿದ್ದರು. ಆದರೆ ಅವರು ಬಾದಾಮಿಯಿಂದ ಬಿಜೆಪಿಯ ಶ್ರೀರಾಮುಲು ಅವರನ್ನು ಸೋಲಿಸಿ ಗೆದ್ದಿದ್ದಾರೆ. ಬಾದಾಮಿಯ ಜನ ತಮ್ಮ ಮೇಲೆ ನಂಬಿಕೆ ಇಟ್ಟು 2018 ರಲ್ಲಿ ವಿಧಾನಸೌಧಕ್ಕೆ ಕಳುಹಿಸಿದರು ಎಂದು ಹೇಳಿದರು.

ಕಳೆದ ಬಾರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. ಆದರೆ, ಈ ಬಾರಿ ಗೆಲ್ಲುವ ವಾತಾವರಣ ಇರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಸದಸ್ಯ ಕೆ. ಮರಿಗೌಡ ಆಹ್ವಾನ ನೀಡಿದರು.

ಮರಿಗೌಡರ ಮಾತಿಗೆ ಕಾಂಗ್ರೆಸ್ ಕಾರ್ಯಕರ್ತರ ಒಂದು ಗುಂಪು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಬಾರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಸಾಕು, ಮತ್ತೆ ಅವರನ್ನು ಆ ಕ್ಷೇತ್ರದಲ್ಲಿ ನಿಲ್ಲಿಸಿ ಸೋಲಿಸುವುದು ಬೇಡ ಎಂದು ಕಿಡಿಕಾರಿದರು. ಈ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಏರುಧ್ವನಿಯಲ್ಲಿ ವಾಗ್ವಾದ ನಡೆಸಿದರು.

ನಾಲ್ಕೈದು ನಿಮಿಷಗಳ ಕಾಲ ಈ ಗೊಂದಲ, ಗದ್ದಲ ಕಂಡು ಬಂತು. ಈ ಗದ್ದಲದ ನಡುವೆಯೇ ಮರಿಗೌಡ ಮಾತು ಮುಂದುವರಿಸಿದರು. ‘ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುವ ವಾತಾವರಣ ಇದೆ. ಅದೇ ರೀತಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ನಾನು ಆಹ್ವಾನ ನೀಡಿದ್ದೇನೆ. ಸ್ಪರ್ಧಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ’ ಎಂದರು.

ನಂತರ ಮಾತನಾಡಿದ ಸಿದ್ದರಾಮಯ್ಯ, ಕಾರ್ಯಕರ್ತರು ಈ ರೀತಿ ಗದ್ದಲ ಮಾಡಬಾರದು. ಪಕ್ಷದಲ್ಲಿ ಶಿಸ್ತು ಇರಬೇಕು. ಶಿಸ್ತು ಇಲ್ಲದ ಪಕ್ಷ ಬಲಯುವತವಾಗಿ ಬೆಳೆಯಲು ಸಾಧ್ಯವಿಲ್ಲ. ಪಕ್ಷದಲ್ಲಿ ಶಿಸ್ತು ಇಲ್ಲದೆ ಇದ್ದರೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಾರೆ. ನನ್ನ ಮೇಲಿನ ಅಭಿಮಾನಕ್ಕೆ ಚಾಮುಂಡೇಶ್ವರಿ ಸ್ಪರ್ಧೆಗೆ ಮರಿಗೌಡ ಆಹ್ವಾನ ನೀಡಿದರು. ಅದಕ್ಕೆ ಬಸವರಾಜು ಹಾಗೂ ಇತರರು ವಿರೋಧ ವ್ಯಕ್ತಪಡಿಸಿದರು. ಇಬ್ಬರ ಅಭಿಪ್ರಾಯ ಕೂಡ ಸರಿ ಇದೆ. ಇಬ್ಬರೂ ನನ್ನ ಮೇಲಿನ ಅಭಿಮಾನಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು. 

SCROLL FOR NEXT