ರಾಜಕೀಯ

ಪಕ್ಷ ಬಯಸಿದರೆ ಮತ್ತೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ; ಕೇಂದ್ರದಲ್ಲಿ ಪ್ರಧಾನಿ ಮೋದಿ ಇರುವವರೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆ: ಶ್ರೀರಾಮುಲು

Sumana Upadhyaya

ಬೀದರ್: ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭಯದಿಂದ 2018ರಲ್ಲಿ ಬಾದಾಮಿ ಕ್ಷೇತ್ರದಲ್ಲಿ ನಿಂತರು. ನನಗೆ ಅಂದು ಮೊಣಕಾಲ್ಮೂರು ಕ್ಷೇತ್ರ ಹೊಸದಾಗಿತ್ತು. ಬಾದಾಮಿ ಕ್ಷೇತ್ರದ ಪ್ರಚಾರಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗಿರಲಿಲ್ಲ. ಸಮಯ ಸಾಕಾಗದೆ ಬಾದಾಮಿ ಕ್ಷೇತ್ರದಲ್ಲಿ ಸಾಕಷ್ಟು ಓಡಾಡಲು ಸಾಧ್ಯವಾಗಿರಲಿಲ್ಲ. ಹೆಚ್ಚು ಸಮಯ ನೀಡಿ ಬಾದಾಮಿ ಕ್ಷೇತ್ರಕ್ಕೆ ಒತ್ತು ನೀಡುತ್ತಿದ್ದರೆ ಸಿದ್ದರಾಮಯ್ಯನವರನ್ನು ಸೋಲಿಸುತ್ತಿದ್ದೆ ಎಂದು ಸಾರಿಗೆ ಇಲಾಖೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

ಬೀದರ್ ನಲ್ಲಿಂದು ಮಾತನಾಡಿದ ಅವರು ಪಕ್ಷ ಸೂಚಿಸಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವೆ. ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಿ ಎಂದು ಪಕ್ಷ ಸೂಚಿಸಿದರೆ ನಾನು ಹಿಂದೆ ಸರಿಯುವುದಿಲ್ಲ, ನನ್ನ ವೈಯಕ್ತಿಕ ಆಸೆಗಳೇನಿದ್ದರೂ ವೈಯಕ್ತಿಕವಾದಂತಹದ್ದು ಎಂದಿದ್ದಾರೆ.

ಸಿದ್ದು ಮತ್ತು ಡಿಕೆ ನಡುವೆ ಸಿಎಂ ಕುರ್ಚಿಗಾಗಿ ಗುದ್ದಾಟ ನಡೆಯುತ್ತಿದೆ. ಸಿದ್ದರಾಮಯ್ಯ ಯಾವ ಪಕ್ಷಕ್ಕೆ ಹೋದ್ರು ಆ ಪಕ್ಷ ಮುಳುಗಿಸ್ತಾರೆ. ಅವರು ಭಸ್ಮಾಸುರ ಇದ್ದ ಹಾಗೆ, ಸಿದ್ದರಾಮಯ್ಯನವರಿಗೆ ಪಕ್ಷದ ಬೆಂಬಲವಿದ್ದ ಕಾರಣ ಅಷ್ಟೊಂದು ಹಾರಾಡುತ್ತಿದ್ದಾರೆ, ವೈಯಕ್ತಿಕ ಸಾಮರ್ಥ್ಯ ಅವರಿಗಿಲ್ಲ. ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ, ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಆದರೆ ಬಿಜೆಪಿ ಖಂಡಿತಾ ಕಾಂಗ್ರೆಸ್ ನ್ನು ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.

ಎಲ್ಲಿಯವರೆಗೆ ಕೇಂದ್ರದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇರುತ್ತಾರೋ ಅಲ್ಲಿಯವರೆಗೆ ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇರುತ್ತದೆ. ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ನಾವು ಚುನಾವಣೆಗೆ ಹೋಗಿ ಗೆಲ್ಲುತ್ತೇವೆ ಎಂದರು.

SCROLL FOR NEXT