ರಾಜಕೀಯ

5 ಬಾರಿ ಶಾಸಕ, ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದ ಪ್ರಕಾಶ್ ಹುಕ್ಕೇರಿಗೆ ಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವು!

Shilpa D

ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಪ್ರಕಾಶ ಹುಕ್ಕೇರಿ ಅವರು 11,460 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಗಳಿಸುವ ಮೂಲಕ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಅರುಣ್ ಶಹಾಪುರ ವಿರುದ್ಧ 6405 ಮತಗಳನ್ನು ಗಳಿಸಿ ನಿರಾಯಾಸವಾಗಿ ಗೆಲುವು ಸಾಧಿಸಿದ್ದಾರೆ.

ಚಿಕ್ಕೋಡಿಯಿಂದ ಐದು ಬಾರಿ ಶಾಸಕ ಮತ್ತು  ಸಂಸದರಾಗಿ ಆಯ್ಕೆಯಾಗಿದ್ದ ಹುಕ್ಕೇರಿ ಮತ ಎಣಿಕೆಯ ಮೊದಲ ಸುತ್ತಿನಿಂದ ಸ್ಥಿರ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ 5045 ಮತಗಳ ಅಂತರದಿಂದ ಗೆದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ತಮ್ಮ ರಾಜಕೀಯ ಜೀವನದಲ್ಲಿ ಅವರು ರಾಜ್ಯ ವಿಧಾನಸಭೆ, ಪರಿಷತ್ತು ಮತ್ತು ಲೋಕಸಭೆಗೆ ಚುನಾವಣೆಗಳನ್ನು ಗೆದ್ದ ಅಪರೂಪದ ಸಾಧನೆಯನ್ನು ಸಾಧಿಸಿದ್ದಾರೆ.

ಪಕ್ಷದ ಟಿಕೆಟ್‌ಗಾಗಿ ಲಾಬಿ ನಡೆಸಿದ ಹಲವು ಸಂಭಾವ್ಯ ನಾಯಕರನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷ ಅವರನ್ನು ಕಣಕ್ಕಿಳಿಸಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿ 2014 ರ ಲೋಕಸಭೆಗೆ ಚಿಕ್ಕೋಡಿಯಿಂದ ಸ್ಪರ್ಧಿಸಿ ಯಶಸ್ವಿಯಾಗಿದ್ದರು.

ಆದರೆ, ಕಳೆದ ಕೆಲವು ವರ್ಷಗಳಿಂದ ರಾಜ್ಯ ರಾಜಕೀಯಕ್ಕೆ ಮರುಪ್ರವೇಶಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದ ಅವರು ಅಂತಿಮವಾಗಿ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿದ್ದರು. ಹುಕ್ಕೇರಿ ಅವರು ಹಲವಾರು ವರ್ಷಗಳ ಕಾಲ ರಾಜ್ಯ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸಿದರು ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.

ಐದು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ತಮ್ಮ ಕ್ಷೇತ್ರದಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳು ವಾಯವ್ಯ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಸಹಕಾರಿಯಾಯಿತು ಎಂದು ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ. ತಮ್ಮ ಪ್ರಯತ್ನದಿಂದ ಬೆಳಗಾವಿ ಮತ್ತು ಚಿಕ್ಕೋಡಿ ಭಾಗದಲ್ಲಿ ಹಲವಾರು ಪ್ರಮುಖ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿವೆ ಎಂದರು. ಮುಂದಿನ ದಿನಗಳಲ್ಲಿ ಎಂಎಲ್‌ಸಿಯಾಗಿ ಶಿಕ್ಷಕರ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

SCROLL FOR NEXT