ರಾಜಕೀಯ

ಕೋಲಾರ: ಕಾಂಗ್ರೆಸ್ ನಲ್ಲಿರುವ 'ಬಿಜೆಪಿಗರನ್ನು' ನಂಬಿ ಕಣಕ್ಕಿಳಿಯಬೇಡಿ; ಸಿದ್ದರಾಮಯ್ಯಗೆ ಮುನಿಯಪ್ಪ ಸಲಹೆ

Srinivasamurthy VN

ಕೋಲಾರ: ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವ ಕುರಿತು ಚರ್ಚೆಗಳು ನಡೆಯುತ್ತಿರುವಂತೆಯೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ಸಿದ್ದುಗೆ ಕಿವಿಮಾತೊಂದನ್ನು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲೇ ಕೆಲ ಬಿಜೆಪಿ ಪರ ಒಲವಿರುವವರಿದ್ದು, ಕಳೆದ ಬಾರಿ ಬಿಜೆಪಿ ಪರವಾಗಿ ಕೆಲಸ ಮಾಡಿದವರನ್ನು ನಂಬಿಕೊಂಡು ಕೋಲಾರಕ್ಕೆ ಬರಬೇಡಿ, ಅವರನ್ನು ನಂಬಿಕೊಂಡು ಬಂದರೆ ಗೆಲುವು ಕಷ್ಟವಾಗಬಹುದು ಎಂದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯಲು ಮುಂದಾಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರಿಗೆ ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ಕಿವಿಮಾತು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ ಅವರು, 'ಕೋಲಾರ ಕಾಂಗ್ರೆಸ್‌ನಲ್ಲಿ ಸಮಸ್ಯೆ ಇದೆ, ಮೂಲ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಸಮಸ್ಯೆಯನ್ನು ಸರಿಪಡಿಸಿಕೊಂಡು ಕೋಲಾರಕ್ಕೆ ಬಂದರೆ ಅನುಕೂಲವಾಗುತ್ತದೆ. ಯಾರನ್ನೋ ನಂಬಿ ಕೋಲಾರಕ್ಕೆ ಬರಬೇಡಿ, ಕಾಂಗ್ರೆಸ್ ಪಕ್ಷಕ್ಕೆ ಯಾರು ನಿಷ್ಠರಿದ್ದಾರೋ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯರವರಿಗೆ ಎಚ್ಚರಿಕೆ ದಾಟಿಯಲ್ಲಿ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ನಾನು ಗುಜರಾತ್ ಚುನಾವಣೆಯ ಪ್ರಚಾರದಲ್ಲಿದೆ. ಹಾಗಾಗಿ, ಅವರ ಸ್ವಾಗತಕ್ಕೆ ಸಿಗಲಿಲ್ಲ ಎಂದರು.ಮುಂದಿನ ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ದೇವನಹಳ್ಳಿಯಿಂದ ಮುಂದಿನ ವಿಧಾನಸಭಾ ಚುನಾವಣಾ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆ.ಹೆಚ್ ಮುನಿಯಪ್ಪ,  'ಒಂದು ವರ್ಷದಿಂದ ದೇವನಹಳ್ಳಿಯಿಂದ ಸ್ಪರ್ಧಿಸುವಂತೆ ಒತ್ತಡವಿದೆ. ಹೈಕಮಾಂಡ್ ತೀರ್ಮಾನದಂತೆ ಹೋಗುತ್ತೇನೆ. ಯಾವುದೇ ಕ್ಷೇತ್ರದ ಸ್ಪರ್ಧೆಗೆ ಗೆಲುವು ಮಾನದಂಡ, ಒಂದೊಂದು ಕ್ಷೇತ್ರದ ಗೆಲುವು ಮುಖ್ಯ ಎಂದರು.
 

SCROLL FOR NEXT