ರಾಜಕೀಯ

ಕಾಂಗ್ರೆಸ್ ನವರು ವೈಚಾರಿಕವಾಗಿ ದಿವಾಳಿಯಾಗಿದ್ದಾರೆ, ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ದೂರು ನೀಡಿದರೆ ಸಮಗ್ರ ತನಿಖೆ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ಕಾಂಗ್ರೆಸ್ ನವರು ಅವರ ವಿಚಾರದಲ್ಲಿ ನಿಜವಾಗಿಯೂ ದಿವಾಳಿಯಾಗಿದ್ದಾರೆ. ಚುನಾವಣಾ ಆಯೋಗ ಮತದಾರರ ಸಮೀಕ್ಷೆ ನಡೆಸಲು ಬಿಬಿಎಂಪಿಗೆ, ಎನ್ ಜಿಒಗಳಿಗೆ ಕೆಲಸದ ಉಸ್ತುವಾರಿ ಕೊಟ್ಟಿರುತ್ತಾರೆ. 2018ರ ವಿಧಾನಸಭೆ ಚುನಾವಣೆಗೆ ಮೊದಲು ಕೂಡ ಕೊಟ್ಟಿದ್ದರು. ಎಲೆಕ್ಷನ್ ಕಮಿಷನ್ ಬಿಬಿಎಂಪಿಗೆ ಕೊಟ್ಟು, ಬಿಬಿಎಂಪಿಯವರು ಸಂಸ್ಥೆಗಳಿಗೆ ಕೊಟ್ಟಿದ್ದನ್ನು ದುರುಪಯೋಗ ಮಾಡಿರುವ ಆರೋಪ ಸಂಬಂಧ ತನಿಖೆ ಮಾಡಲು ನಾನು ಸೂಚನೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮವಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ವಹಿಸಿರುತ್ತಾರೆ. ಅವರು ಸಮೀಕ್ಷಾ ಕೆಲಸವನ್ನು ಎನ್.ಜಿ.ಓ ಗಳಿಗೆ ನೀಡಿರುತ್ತಾರೆ. ಇದೇನು ಮೊದಲ ಬಾರಿ ನೀಡಿರುವುದಲ್ಲ. 2018 ರಲ್ಲಿ ಇದ್ದ ಸರ್ಕಾರದ ಕಾಲದಲ್ಲಿಯೂ ನೀಡಿದ್ದಾರೆ. ಎನ್.ಜಿ.ಒ. ಬಿ.ಎಲ್.ಡಿ ದುರ್ಬಳಕೆ ಮಾಡಿದ್ದಾರೆ. ಆದ್ದರಿಂದ ಚುನಾವಣಾ ಆಯೋಗ ನೀಡಿರುವ ಆದೇಶದಿಂದ ಮೊದಲುಗೊಂಡು ಇಡೀ ಪ್ರಕರಣದ ಸಮಗ್ರ ತನಿಖೆಗೆ ಸೂಚನೆ ನೀಡುತ್ತೇನೆ. ನಿಜ ಹೊರಗೆ ಬರಲಿ ಎಂದರು.

ಆಧಾರರಹಿತ ಆರೋಪ :ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯಿಸುವುದು ಹಾಸ್ಯಾಸ್ಪದ. ಸಂಬಂಧವಿಲ್ಲದ್ದನ್ನು ಕೇಳುತ್ತಿದ್ದಾರೆ. ಅದೇ ಮಾನದಂಡವಾದರೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಮೂರು ಬಾರಿ ರಾಜೀನಾಮೆ ನೀಡಬೇಕಿತ್ತು. ಇದೊಂದು ಆಧಾರರಹಿತ ಆರೋಪ ಎಂದರು.

ಮತದಾರರ ಯಾವ ವೈಯಕ್ತಿಕ ವಿಷಯಗಳು ಸೋರಿಕೆಯಾಗಿವೆ, ಯಾರಿಗೆ ಸೋರಿಕೆಯಾಗಿವೆ ಎಂಬ ಬಗ್ಗೆ ಆಧಾರಗಳಿಲ್ಲ. ಕಾಂಗ್ರೆಸ್ ನಾಯಕರಿಗೆ ಇದರ ಬಗ್ಗೆ ಅರಿವಿಲ್ಲ. ಅವರು ಮಾಡುತ್ತಿರುವುದು ಆಧಾರರಹಿತ ಆರೋಪ. ಬಿಬಿಎಂಪಿ ಆಯುಕ್ತರಿಗೆ ದೂರು ಸಲ್ಲಿಸುವಂತೆ ನಾನು ಹೇಳಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

SCROLL FOR NEXT