ರಾಜಕೀಯ

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ: ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಿದೆ ಕಾಂಗ್ರೆಸ್ ಸ್ಥಿತಿ; ಸಚಿವ ಸುಧಾಕರ್

Manjula VN

ಬೆಂಗಳೂರು: ಮತದಾರರ ಗುರುತಿನ ಚೀಟಿ ಅಕ್ರಮ ಆರೋಪ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

ಅರೋಗ್ಯ ಸಚಿವ ಡಾ ಕೆ.ಸುಧಾಕರ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, 'ಕುಣಿಯಲಾರದವನಿಗೆ ನೆಲ ಡೊಂಕು' ಎಂಬಂತೆ ಜನರ ವಿಶ್ವಾಸ ಕಳೆದುಕೊಂಡು ಹತಾಶಗೊಂಡಿರುವ ಕಾಂಗ್ರೆಸ್ ಪಕ್ಷ ಮತಯಂತ್ರಗಳ ಮೇಲೆ ಸಂಶಯ ಮೂಡಿಸುವುದು, ಚುನಾವಣಾ ಆಯೋಗದ ಬಗ್ಗೆ ಅಪಸ್ವರ ಎತ್ತುವುದು ಹೀಗೆ ಒಂದಲ್ಲಾ ಒಂದು ಕ್ಯಾತೆ ತೆಗೆಯುತ್ತಲೆ ಬಂದಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ ಈ ಸುಳ್ಳುಗಳ ಸರಮಾಲೆಗೆ ಹೊಸ ಸೇರ್ಪಡೆಯಷ್ಟೆ ಎಂದು ಹೇಳಿದ್ದಾರೆ.

ದಿಟ್ಟ ನಾಯಕತ್ವ, ಅಭಿವೃದ್ಧಿ, ಸುಶಾಸನ, ಭ್ರಷ್ಟಾಚಾರ-ಮುಕ್ತ ಆಡಳಿತ ನೀಡುವ ಮೂಲಕ ದೇಶಾದ್ಯಂತ ಜನಮನ್ನಣೆ ಪಡೆಯುತ್ತಿರುವ ನಮ್ಮ ಪಕ್ಷಕ್ಕೆ ಚುನಾವಣೆ ಗೆಲ್ಲಲು ಯಾವುದೇ ವಾಮ ಮಾರ್ಗದ ಅವಶ್ಯಕತೆಯೂ ಇಲ್ಲ ಅದರ ಬಗ್ಗೆ ನಂಬಿಕೆಯೂ ಇಲ್ಲ.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ 2017ರಲ್ಲಿ ಅಂದಿನ ಕಾಂಗ್ರೆಸ್ ಸರಕಾರವೇ ಅನುಮತಿ ಕೊಟ್ಟ ಒಂದು ಸಂಸ್ಥೆಯ ಮೇಲೆ ಈಗ ಇಲ್ಲಸಲ್ಲದ ಆರೋಪ ಮಾಡಿ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು 'ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತಾಗಿದೆ' ಎಂದು ತಿಳಿಸಿದ್ದಾರೆ.

SCROLL FOR NEXT