ರಾಜಕೀಯ

ಎಐಸಿಸಿಗೆ ಯಾರೇ ಅಧ್ಯಕ್ಷರಾದರು ರಿಮೋಟ್ ಕಂಟ್ರೋಲ್ ಗಾಂಧಿ ಕುಟುಂಬದ ಕೈಯಲ್ಲಿರುತ್ತದೆ: ಪ್ರಹ್ಲಾದ್ ಜೋಶಿ

Shilpa D

ವಿಜಯಪುರ: ಎಐಸಿಸಿ ಅಧ್ಯಕ್ಷರು ಯಾರೇ ಆದರೂ ರಿಮೋಟ್‌ ಕಂಟ್ರೋಲ್‌ನಲ್ಲೇ ಕೆಲಸ ಮಾಡಬೇಕು. ಹೀಗಾಗಿ ರಾಜ್ಯದವರಾದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೂ ಆ ಸ್ಥಾನಕ್ಕೆ ಅರ್ಥ, ಘನೆತೆಯೇ ಬರುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಸೈನಿಕ ಶಾಲಾ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದರೂ ಯಾವುದೇ ವಿಶೇಷತೆ ಇಲ್ಲ. ಕಾಂಗ್ರೆಸ್‌ನಲ್ಲಿ ಯಾರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರೂ ಗಾಂಧಿ ಕುಟುಂಬದ ಕೈಯ್ಯಲ್ಲೇ ರಿಮೋಟ್‌ ಕಂಟ್ರೋಲ್‌ನಲ್ಲೇ ಇರುತ್ತದೆ ಎಂದಿದ್ದಾರೆ.

ದಶಕಗಳ ಕಾಲ ದೇಶದ ಪ್ರಧಾನಿ ಆಗಿದ್ದ ಮನಮೋಹನಸಿಂಗ್‌ ಆಡಳಿತವನ್ನು ದೇಶದ ಜನತೆ ಕಣ್ಣಾರೆ ಕಂಡಿದ್ದಾರೆ. ರಾಜಕೀಯ ಗಂಭೀರತೆ ಇಲ್ಲದ ರಾಹುಲ್‌ ಗಾಂಧಿ ಜವಾಬ್ದಾರಿ ಇಲ್ಲದ ವ್ಯಕ್ತಿ. ಇಂತಹ ವ್ಯಕ್ತಿ ಭಾರತ ಜೋಡೋ ಎಂದು ಪಾದಯಾತ್ರೆ ಹೊರಟರೆ ಜನತೆ ಸ್ಪಂದಿಸಲು ಸಾಧ್ಯವಿಲ್ಲ. ರಾಜಕೀಯ ಲಾಭಕ್ಕಾಗಿ ನಡೆಸುವ ಇಂಥ ಬೆಳವಣಿಗೆಗೆ ಜನರು ಮರುಳಾಗಲ್ಲ ಎಂದು ಹೇಳಿದರು.

ಒಂದೊಮ್ಮೆ ಕಾಂಗ್ರೆಸ್‌ ನಾಯಕರು ಅಲ್ಲಲ್ಲಿ ಚುನಾವಣೆಗಳಲ್ಲಿ ವಿಜಯ ಸಾಧಿಸಿದ್ದಾರೆ ಎಂದಾದರೆ ಅದು ಸ್ಥಳೀಯವಾಗಿ ಅವರು ಹೊಂದಿರುವ ರಾಜಕೀಯ ಹಿಡಿತದಿಂದಲೇ ಹೊರತು ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಇತರೆ ನಾಯಕರ ನಾಯಕತ್ವದಿಂದ ಅಲ್ಲ. ಸದ್ಯ ಕಾಂಗ್ರೆಸ್‌ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಬಿಜೆಪಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಪಕ್ಷ ಹಾಗೂ ಸರ್ಕಾರಗಳು ಜನತೆಯ ಹಿತಕ್ಕಾಗಿ ರೂಪಿಸಿರುವ ಯೋಜನೆಗಳ ಅನುಷ್ಠಾನದತ್ತ ಚಿತ್ತ ನೆಟ್ಟಿವೆ ಎಂದರು.

SCROLL FOR NEXT