ರಾಜಕೀಯ

ತಾಯಿ-ಮಗನ ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಪರಿಣಾಮ ಬೀರದು, ನಾಗರಹೊಳೆಯ ಮರಿ ಆನೆಗೆ ಸೂಕ್ತ ಚಿಕಿತ್ಸೆ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ನಾಗರಹೊಳೆ ಅಭಯಾರಣ್ಯದಲ್ಲಿ ಮರಿ ಆನೆಗೆ ತೀವ್ರ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಮರಿ ಆನೆಗೆ ಉತ್ತಮ ಚಿಕಿತ್ಸೆ ನೀಡಲು ಇರುವ ಸಾಧ್ಯತೆಗಳೆಲ್ಲವನ್ನೂ ಗಮನಿಸಿ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು,ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ ಇಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಜೊತೆಜೊತೆಯಾಗಿ ಹೆಜ್ಜೆ ಹಾಕುತ್ತಿದ್ದು, ಈ ಬಗ್ಗೆ ಸುದ್ದಿಗಾರರು ಕೇಳಿದಾಗ ಇದರಿಂದ ರಾಜ್ಯ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದರು.

ಬಿಜೆಪಿಯಿಂದ ಪೂರ್ವ ನಿಗದಿ ರ್ಯಾಲಿ: ಇನ್ನು ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಸ್ವಂತ ಬಲದ ಮೇಲೆ ಮತ್ತೊಮ್ಮೆ ಅಧಿಕಾರ ಹಿಡಿಯಲು ಆಡಳಿತಾರೂಢ ಬಿಜೆಪಿ ಇದೇ 11ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಘಟನಾ ಪ್ರವಾಸ ರ್ಯಾಲಿ ಮಾಡುತ್ತಿವೆ.

ಅ.11ರಿಂದ 13ರವರೆಗೆ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿಯಲ್ಲಿ ಸಂಘಟನಾ ಪ್ರವಾಸ ನಡೆಸಿ ಅ.16ರಂದು ಎಸ್ಸಿ ಮೋರ್ಚಾ ರ್ಯಾಲಿ ನಡೆಯಲಿದೆ. ಅ.19ರಿಂದ 23ರವರೆಗೆ ಬೀದರ್, ಯಾದಗಿರಿ, ಕಲಬುರಗಿಯಲ್ಲಿ ಪ್ರವಾಸ ನಡೆಸಿ, 30ರಂದು ಒಬಿಸಿ ಮೋರ್ಚಾ ರ್ಯಾಲಿ, ನ.2ರಿಂದ 9ರವರೆಗೆ ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ ಬಳಿಕ ನ.13ರಂದು ಹುಬ್ಬಳ್ಳಿಯಲ್ಲಿ ಬೃಹತ್ ರೈತ ಮೋರ್ಚಾ ರ್ಯಾಲಿ ನಡೆಸಲು ತೀರ್ಮಾನಿಸಲಾಗಿದೆ.

ನ.15ರಿಂದ 23ರವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ದಾವಣಗೆಎ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಪ್ರವಾಸ ಮಾಡಿ ನ.27ರಂದು ಯುವ ಮೋರ್ಚಾ ರ್ಯಾಲಿ, ನ.29ರಿಂದ ಡಿ.7ರವರೆಗೆ ತುಮಕೂರು, ಕೋಲಾರ, ಬೆಂಗಳೂರು ನಗರದಲ್ಲಿ ಪ್ರವಾಸ ನಡೆಸಿ ಡಿ.11ರಂದು ಎಸ್ಟಿ ಮೋರ್ಚಾ ರ್ಯಾಲಿ, ಡಿ.11ರಿಂದ 25ರವರೆಗೆ ವಿಜಯಪುರ, ಬಾಗಲಕೋಟೆ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಮಹಿಳಾ ಮೋರ್ಚಾ ರ್ಯಾಲಿಗಳನ್ನು ನಡೆಸಲು ಉದ್ದೇಶಿಸಲಾಗಿದೆ.

ಈ ಬಗ್ಗೆ ಇಂದು ಸುದ್ದಿಗಾರರು ಕೇಳಿದಾಗ ಇದಕ್ಕೂ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೂ ಸಂಬಂಧವಿಲ್ಲ. ಇದು ಬಿಜೆಪಿಯ ಪೂರ್ವ ನಿಗದಿತ ರ್ಯಾಲಿ. ಅದಕ್ಕೂ ಮುಂಚೆಯೂ ನಾವು ತೀರ್ಮಾನ ಮಾಡಿದ್ದೆವು. ನಂತರ ವಿಧಾನಮಂಡಲ ಕಲಾಪ, ದಸರಾ ಹಬ್ಬ, ನಾಳೆ ಬಿಜೆಪಿ ಕಾರ್ಯಕಾರಿಣಿಯಿದೆ. ಅದೆಲ್ಲವೂ ಮುಗಿದ ಮೇಲೆ ಬಿಜೆಪಿ ಪ್ರವಾಸ ಆರಂಭವಾಗುತ್ತದೆ.ಕಾಂಗ್ರೆಸ್ ನಾಯಕರು ರಾಜ್ಯಕ್ಕೆ ಬರುತ್ತಾರೆ, ಬರಲಿ ಬಿಡಿ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

SCROLL FOR NEXT