ರಾಜಕೀಯ

ರಾಯಚೂರು ಬಳಿ ರಾಹುಲ್ ಗಾಂಧಿ 'ಭಾರತ್ ಜೋಡೋ ಯಾತ್ರೆ' ಕರ್ನಾಟಕಕ್ಕೆ ಮರುಪ್ರವೇಶ!

Manjula VN

ರಾಯಚೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಶುಕ್ರವಾರ ಆಂಧ್ರ ಪ್ರದೇಶದ ಮಂತ್ರಾಲಯದಿಂದ ರಾಯಚೂರು ಜಿಲ್ಲೆಯ ಗಿಲ್ಲೆಸುಗೂರು ಗ್ರಾಮಕ್ಕೆ ಆಗಮಿಸಿದೆ.

ಕಳೆದ 4 ದಿನಗಳಿಂದ ಆಂಧ್ರ ಪ್ರದೇಶದಲ್ಲಿ ನಡೆದ ಯಾತ್ರೆಯಲ್ಲಿ ರಾಹುಲ್‍ಗಾಂಧಿ ಕಾರ್ಮಿಕರು, ಕೃಷಿಕರು, ಪೌರ ಕಾರ್ಮಿಕರು, ಉದ್ಯಮಿಗಳು ಸೇರಿದಂತೆ ಹಲವಾರು ಜನರೊಂದಿಗೆ ಸಂವಾದ ನಡೆಸಿದರು. 

ಶುಕ್ರವಾರ ಬೆಳಗ್ಗೆ ಆಂಧ್ರಪ್ರದೇಶದ ಗಡಿ ಗ್ರಾಮವಾದ ಮಾಧವರಂನಲ್ಲಿರುವ ದಲಿತ ಮಹಿಳೆ ಲಕ್ಷ್ಮಮ್ಮ ಅವರ ಮನೆಯಲ್ಲಿ ಉಪಹಾರ ಸೇವಿಸಿದ ರಾಹುಲ್ ಗಾಂಧಿ, ತುಂಗಭದ್ರಾ ಸೇತುವೆ ದಾಟಿ ರಾಯಚೂರಿಗೆ ಪಾದಯಾತ್ರೆ ಆರಂಭಿಸಿದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಗಡಿಯಲ್ಲಿ ರಾಹುಲ್ ಅವರನ್ನು ಬರಮಾಡಿಕೊಂಡರು. ನಂತರ ರಾಹುಲ್‍ಗಾಂಧಿ ಮಂತ್ರಾಲಯದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. 

ಹಾದಿ ಮಧ್ಯೆ ಕೋವಿಡ್‍ನಿಂದ ಸಂಕಷ್ಟಕ್ಕೊಳಗಾದವರು, ಜೀವಹಾನಿಗೊಳಗಾದ ಕುಟುಂಬದ ಸದಸ್ಯರು ಸೇರಿದಂತೆ ಹಲವರ ಜತೆ ಸಮಾಲೋಚನೆ ನಡೆಸಿದರು.

ರಾಹುಲ್ ಅವರ ಪಾದಯಾತ್ರೆ ಜೊತೆಗೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕರ್ನಾಟಕ ಕಾಂಗ್ರೆಸ್‌ನ ಮಾಧ್ಯಮ ಉಸ್ತುವಾರಿ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಉಪಾಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ-ಕರ್ನಾಟಕ ಭಾಗದ ಸಾವಿರಾರು ಜನರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ತಂಡಗಳು ಡೊಳ್ಳು ಕುಣಿತ ಮತ್ತು ಕೋಲಾಟ ಪ್ರದರ್ಶಿಸಿದರೆ, ಜನರು ಕಾಂಗ್ರೆಸ್ ಧ್ವಜಗಳನ್ನು ಕೈಯಲ್ಲಿ ಹಿಡಿದಿದ್ದರಿಂದ ಸ್ಥಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಶುಕ್ರವಾರ ಬೆಳಗ್ಗೆ 10 ಗಂಟೆಗೆ ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಗ್ರಾಮಕ್ಕೆ ಯಾತ್ರೆ ಆಗಮಿಸಿತು. ನಂತರ ಸಂಜೆ 4 ಗಂಟೆಗೆ ಕೆರೆಬೂದೂರು ಗ್ರಾಮದಿಂದ ಯಾತ್ರೆ ಮುಂದುವರಿಸಿದ ರಾಹುಲ್ ಸಂಜೆ 7 ಗಂಟೆಗೆ ಯರಗೇರಾ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆದುಕೊಂಡರು. ಶುಕ್ರವಾರ ರಾಯಚೂರು ಜಿಲ್ಲೆಯಲ್ಲಿ 25 ಕಿ.ಮೀ ಪಾದಯಾತ್ರೆ ನಡೆಸಿದ ರಾಹುಲ್ ಶನಿವಾರ ಮತ್ತೆ ಯಾತ್ರೆ ಆರಂಭಿಸಲಿದ್ದಾರೆ.

ಎರಡು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಪಾದಯಾತ್ರೆ ಸಂಚರಿಸಲಿದೆ. ರಾಜ್ಯದಲ್ಲಿ ಸೆ.30 ರಿಂದ ಅ.15ರ ವರೆಗೆ ನಿರಂತರವಾಗಿ ನಡೆದ ಪಾದಯಾತ್ರೆ ಮತ್ತು ಎರಡನೆ ಹಂತದಲ್ಲಿ ಈಗ ನಡೆಯುತ್ತಿರುವ ಯಾತ್ರೆ ಕೊನೆ ಹಂತ ತಲುಪಿದ್ದು, ಇಲ್ಲಿಂದ ತೆಲಂಗಾಣದತ್ತ ಪ್ರಯಾಣಿಸಲಿದೆ.

SCROLL FOR NEXT