ರಾಜಕೀಯ

ಮಂಗಳೂರು ಪಾಲಿಕೆ ಬಿಜೆಪಿ ತೆಕ್ಕೆಗೆ: ನೂತನ ಮೇಯರ್ - ಜಯಾನಂದ ಅಂಚನ್, ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆ

Shilpa D

ಮಂಗಳೂರು: ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್ ಆಗಿ ಬಿಜೆಪಿಯ ಹಿರಿಯ ಕಾರ್ಪೊರೇಟರ್ ಜಯಾನಂದ ಅಂಚನ್ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ಬಿಜೆಪಿಯ ಕಾರ್ಪೊರೇಟರ್ ಪೂರ್ಣಿಮಾ ಆಯ್ಕೆಯಾಗಿದ್ದಾರೆ.

ಸೆ.9ರ ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಇಬ್ಬರು ಶಾಸಕರು ಸೇರಿದಂತೆ ಉಪಸ್ಥಿತರಿದ್ದ ಒಟ್ಟು ಮತದಾರರಲ್ಲಿ 46 ಮಂದಿ ಜಯಾನಂದ ಪರ ಮತ ಚಲಾಯಿಸಿದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಹಿರಿಯ ಕಾರ್ಪೊರೇಟರ್ ಶಶಿಧರ ಹೆಗ್ಡೆ 14 ಮತ ಗಳಿಸಿದರು.

ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೆಂಟ್ರಲ್ ಮಾರ್ಕೆಟ್ ವಾರ್ಡ್ ಸದಸ್ಯೆ ಪೂರ್ಣಿಮಾ 46 ಮತಗಳನ್ನು ಗಳಿಸಿ ಚುನಾಯಿತರಾದರು. ಅವರ ವಿರುದ್ಧ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಬಂದರು ವಾರ್ಡ್ ಸದಸ್ಯೆ ಝೀನತ್ ಶಂಸುದ್ದೀನ್ 14 ಮತಗಳನ್ನು ಗಳಿಸಿದರು. ಮತದಾನ ಪ್ರಕ್ರಿಯೆಯಲ್ಲಿ ಎಸ್ ಡಿಪಿಐ ಇಬ್ಬರು ಸದಸ್ಯರು ತಟಸ್ಥರಾಗಿದ್ದರು.

ಮತದಾನದಲ್ಲಿ ಒಟ್ಟು 60 ಕಾರ್ಪೊರೇಟರ್ ಗಳು, ಇಬ್ಬರು ಶಾಸಕರು, ಒಬ್ಬರು ಸಂಸದರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಭಾಗವಹಿಸಬೇಕಿತ್ತು. ಇವರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಮಂಜುನಾಥ ಭಂಡಾರಿ ಗೈರು ಹಾಜರಾಗಿದ್ದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

SCROLL FOR NEXT