ರಾಜಕೀಯ

ಉಮೇಶ್ ಕತ್ತಿ ನಿಧನ ರಾಜ್ಯ ಬಿಜೆಪಿಗೆ ತುಂಬಲಾರದ ನಷ್ಟ: ಅರುಣ್ ಸಿಂಗ್

Shilpa D

ಬೆಳಗಾವಿ: ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ನನ್ನ ಮಿತ್ರ ಉಮೇಶ್ ಕತ್ತಿಯವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಕರ್ನಾಟಕಕ್ಕೆ, ಬಿಜೆಪಿ ಮತ್ತು ವೈಯಕ್ತಿಕವಾಗಿ ಅಪಾರ ನಷ್ಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಕಂಬನಿ ಮಿಡಿದರು.

ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಡಾ. ಕೆ. ಸುಧಾಕರ್, ಮುನಿರತ್ನ ಭೈರತಿ ಬಸವರಾಜ ಸೇರಿದಂತೆ ಹಲವು ಗಣ್ಯರು ಬೆಲ್ಲದ ಬಾಗೇವಾಡಿಯ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ಉಮೇಶ್ ಕತ್ತಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಗಣ್ಯರು, ಉಮೇಶ್ ಕತ್ತಿ ಅವರ ಪತ್ನಿ ಶೀಲಾ, ಪುತ್ರ ನಿಖಿಲ್, ಸಹೋದರ ರಮೇಶ್ ಕತ್ತಿ ಇವರ ಮಕ್ಕಳಾದ ಪೃಥ್ವಿ ಮತ್ತು ಪವನ್ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಭೇಟಿ ಬಳಿಕ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಸಚಿವ ಉಮೇಶ ಕತ್ತಿ ನನ್ನ ವೈಯಕ್ತಿಕ ಮಿತ್ರ. ಬೆಳಗಾವಿ, ಬೆಂಗಳೂರು, ದೆಹಲಿಯಲ್ಲಿ ಅನೇಕ ಸಲ ಚರ್ಚೆ ಮಾಡಿದ್ದೇವೆ.‌ ರಾಜ್ಯದ ಅಭಿವೃದ್ಧಿ, ಪಕ್ಷ ಕಟ್ಟುವ ಬಗ್ಗೆ ಅನೇಕ ಸಲಹೆ ನೀಡುತ್ತಿದ್ದರು. ಉಮೇಶ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಪಕ್ಷ, ರಾಜ್ಯಕ್ಕೆ ಉಮೇಶ ಕತ್ತಿ ಅಗಲಿಕೆಯಿಂದ ನಷ ಆಗಿದೆ. 40 ವರ್ಷಗಳ ಕಾಲ ಜನ ಆಶೀರ್ವಾದ ಮಾಡಿದ್ದಾರೆ. 40 ವರ್ಷಗಳ ರಾಜಕೀಯ ಜೀವನದ ಕುರಿತು ಪುಸ್ತಕದ ರೂಪದಲ್ಲಿ ಹೊರ ಬರಬೇಕು ಎಂದರು. ಒಬ್ಬ ರಾಜಕೀಯ ನಾಯಕ 40 ವರ್ಷಗಳ ಶಾಸಕನಾಗಿ ಮಾಡಿದ ಕೆಲಸ, ಅವರ ದೂರದೃಷ್ಟಿ ಅವರ ಆಲೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ. ಈ ನಿಟ್ಟಿನಲ್ಲಿ ಒಂದು ಸಮಗ್ರ ಪುಸ್ತಕ ಬಿಡುಗಡೆ ಮಾಡಬೇಕು ಎಂದರು.

ಉಮೇಶ ಕತ್ತಿಯವರ ಯೋಜನೆಗಳನ್ನು ರಾಜ್ಯ ಸರಕಾರ ಅನುಷ್ಠಾನಕ್ಕೆ ತರಲಿದೆ. ಅವರ ಆಶಯಗಳನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರೆ ಎಂದು ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಸುಧಾಕರ್ ಉತ್ತರಿಸಿದರು. ಉಮೇಶ್ ಕತ್ತಿ ಅವರ ಆಶಯಗಳನ್ನು ನಮ್ಮ ಸರ್ಕಾರ ಅನುಷ್ಠಾನಕ್ಕೆ ತರಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಭರವಸೆ ನೀಡಿದರು.

ಹುಕ್ಕೇರಿಯ ಹಿಡಕಲ್ ಅಣೆಕಟ್ಟಿನ ಬಳಿ ಬೃಂದಾವನ ಉದ್ಯಾನವನದ ಮಾದರಿಯಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸುವ ಮಾಜಿ ಸಚಿವ ಉಮೇಶ ಕತ್ತಿ ಅವರ ಕನಸನ್ನು ನನಸಾಗಿಸಲು ಸಿಎಂ ಬೊಮ್ಮಾಯಿ ಎಲ್ಲಾ ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

SCROLL FOR NEXT