ರಾಜಕೀಯ

ಬಿರುಕು ಮೂಡಿಸಿದ 'ಭಾರತ್ ಜೋಡೋ': ಪೂರ್ವಭಾವಿ ಸಭೆಗೆ ಆಹ್ವಾನಿಸದ್ದಕ್ಕೆ ಸಿದ್ದರಾಮಯ್ಯ ಆಕ್ರೋಶ; ವಲಸೆ ನಾಯಕರ ನಿರ್ಲಕ್ಷ್ಯ!

Shilpa D

ಬೆಂಗಳೂರು: ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಎಲ್ಲಾ ಕಾಂಗ್ರೆಸ್ ನಾಯಕರನ್ನು ಒಂದು ಗೂಡಿಸುವ ಬದಲು ರಾಜ್ಯ ನಾಯಕರಲ್ಲಿ ಬಿರುಕು ಮೂಡಿಸುತ್ತಿದೆ.

ಮೂಲ ಮತ್ತು ವಲಸಿಗ ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ, ಭಾರತ್ ಜೋಡೋ ಪೂರ್ವಭಾವಿ ಸಭೆಗೆ ತಮ್ಮನ್ನು ಆಹ್ವಾನಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಿದ್ದರಾಮಯ್ಯ  ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಿಸ್ ಕಮ್ಯುನಿಕೇಶನ್ ಕಾರಣದಿಂದಾಗಿ  ಮಂಗಳವಾರ ನಿಗದಿತ ಕಾಂಗ್ರೆಸ್ ಶಾಸಕಾಂಗ ಸಭೆಯೂ ಪ್ರಾರಂಭವಾಗುವ ಮುನ್ನ ಖಾಸಗಿ ಹೋಟೆಲ್ ನಲ್ಲಿ ಸುಮಾರು 15 ಮಾಜಿ ಸಚಿವರ ಸಭೆ ಕರೆಯಲಾಗಿತ್ತು. 

ಈ ವೇಳೆ ಎದುರುಬದುರು ಹಾಲ್​ನಲ್ಲಿ ಶಾಸಕಾಂಗ ಸಭೆ ಹಾಗೂ ಭಾರತ್ ಜೋಡೋ ಪಾದಯಾತ್ರೆಗೆ ಮೀಟಿಂಗ್ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಶಾಸಕಾಂಗ ಸಭೆಗೆ ಆಗಮಿಸುವ ವೇಳೆಗೆ ಭಾರತ್ ಜೋಡೊ ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಡಿ.ಕೆ.ಶಿವಕುಮಾರ್ ಕುಳಿತಿದ್ದರು.

ಈ ವೇಳೆ ಸಿದ್ದರಾಮಯ್ಯ ಅವರನ್ನು ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಮಾಜಿ ಸಚಿವರ ಸಭೆಗೆ ಆಗಮಿಸುವಂತೆ ಕಾಂಗ್ರೆಸ್ ನಾಯಕರಾದ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಆಹ್ವಾನಿಸಿದರು. ಆದರೆ ಸಿದ್ದರಾಮಯ್ಯ ಈ ಆಹ್ವಾನವನ್ನು ನೇರವಾಗಿ ತಿರಸ್ಕರಿಸಿದರು. ‘ನನಗೆ ಭಾರತ್ ಜೋಡೋ ಮೀಟಿಂಗ್ ಹೇಳಿಲ್ಲ, ಕರೆದಿಲ್ಲ ಮಾಡಿಲ್ಲ, ನಾನ್ಯಾಕೆ ಬರಲಿ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.  ಬಳಿಕ ಸಿದ್ದರಾಮಯ್ಯ ಅವರಿಗೆ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಸಮಜಾಯಿಷಿ ನೀಡಿದರು.

ಸಭೆಯ ಬಗ್ಗೆ ಮಾಹಿತಿ ನೀಡದ ಕಾರಣ, ಸಿದ್ದರಾಮಯ್ಯ ಸಿಟ್ಟಾದರು ಮತ್ತು ಭಾಗವಹಿಸಲು ನಿರಾಕರಿಸಿದ ವೀಡಿಯೊ ವೈರಲ್ ಆಗಿದೆ.  ಸಲೀಂ ಮತ್ತು ಕಾಂಗ್ರೆಸ್ ಮುಖ್ಯ ಸಚೇತಕ ಅಜಯ್ ಸಿಂಗ್ ಅವರು ಸಿದ್ದರಾಮಯ್ಯ ಅವರನ್ನು ಸಮಾಧಾನ ಪಡಿಸಿ ಸಭೆಗೆ ಬರುವಂತೆ ಮನವೊಲಿಸಿದರು.

ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಹೊರಗೆ ಪ್ರವಾಸದಲ್ಲಿದ್ದ ಕಾರಣ ತಡವಾಗಿ ಮಾಹಿತಿ ತಲುಪಿದ್ದರಿಂದ ಪಕ್ಷದ ಪದಾಧಿಕಾರಿಗಳು 'ಮಿಸ್ ಕಮ್ಯುನಿಕೇಷನ್' ಕಾರಣ ಎಂದು ಹೇಳಿದ್ದಾರೆ. ರಾಯಚೂರಿನಲ್ಲಿ ನಡೆದ ಭಾರತ್ ಜೋಡೋ ಪಾದಯಾತ್ರೆ ಪೂರ್ವಭಾವಿ ಸಭೆಗೆಂದು ಅಳವಡಿಸಿದ್ದ ಫ್ಲೆಕ್ಸ್​ನಲ್ಲಿ ಸಿದ್ದರಾಮಯ್ಯ ಭಾವಚಿತ್ರ ನಾಪತ್ತೆಯಾಗಿತ್ತು. ಇದು ಕಾಂಗ್ರೆಸ್​ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

SCROLL FOR NEXT