ಡಿಕೆ ಶಿವಕುಮಾರ್ 
ರಾಜಕೀಯ

ಪೇಸಿಎಂ ಫೋಸ್ಟರ್ ವಿವಾದ: ಸಿಎಂ ಬೊಮ್ಮಾಯಿ ಗಾಬರಿಯಾಗಿರುವುದು ಏಕೆ? ಡಿಕೆಶಿ ಪ್ರಶ್ನೆ

ಪೇಸಿಎಂ ಪೋಸ್ಟರ್ ವಿವಾದ ರಾಜ್ಯ ರಾಜಕೀಯದಲ್ಲಿ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವಣ ಆರೋಪ, ಪ್ರತ್ಯಾರೋಪ, ವಾಗ್ದಾಳಿಗಳು ನಡೆಯುತ್ತಿವೆ.

ಬೆಂಗಳೂರು: ಪೇಸಿಎಂ ಪೋಸ್ಟರ್ ವಿವಾದ ರಾಜ್ಯ ರಾಜಕೀಯದಲ್ಲಿ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವಣ ಆರೋಪ, ಪ್ರತ್ಯಾರೋಪ, ವಾಗ್ದಾಳಿಗಳು ನಡೆಯುತ್ತಿವೆ.

ಈ ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪೇ ಸಿಎಂ ಫೋಸ್ಟರ್ ವಿವಾದ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಾಬರಿಯಾಗಿರುವುದು ಏಕೆ? ಈ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದು ಏಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ನಾಳೆ ನಮ್ಮ ಎಲ್ಲಾ ಶಾಸಕರು ಸೇರಿ ಪೇ ಸಿಎಂ ಪೋಸ್ಟರ್ ಅನ್ನು ಸರ್ಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ. ಎಲ್ಲಿ ಅಂಟಿಸುತ್ತೇವೆ ಎಂದು ಮುಂದೆ ತಿಳಿಸುತ್ತೇವೆ. ಬಿಜೆಪಿ ಅವರು ನಮ್ಮ ಬಗ್ಗೆಯೂ ಕ್ಯೂಆರ್ ಕೋಡ್ ಹಾಕಿದ್ದಾರೆ. ನಾನು ವಿಚಾರಣೆಗೆ ಹೋದ ಸಮಯದಲ್ಲಿ ನಾನು ಕಂಬಿ ಹಿಂದೆ ಇರುವಂತೆ ಮಾಧ್ಯಮಗಳು ಫೋಟೋ ಹಾಕಿದ್ದರು. ಹಾಗೆಂದು ನಾನು ಅವರ ವಿರುದ್ಧ ದೂರು ನೀಡಲು ಸಾಧ್ಯವೇ? ರಾಜಕೀಯದಲ್ಲಿ ಇರುವವರನ್ನು ಜನ ಪ್ರಶ್ನಿಸುವುದು, ಟೀಕಿಸುವುದು ಸಹಜ. ಅಧಿಕಾರದಲ್ಲಿ ಇರುವವರು ಇದನ್ನು ಜೀರ್ಣಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ನಮ್ಮ ಅಭಿಯಾನದಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ, ನಾವು ಭ್ರಷ್ಟಾಚಾರಕ್ಕೆ ಬಲಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ಪಕ್ಷದ ವತಿಯಿಂದ ನಾವೇ ಟೋಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಲು ಹೇಳಿದ್ದೆವು. ನಾವು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಬಿಜೆಪಿ ಅವರು ನಮ್ಮ ಬಗ್ಗೆಯೂ ಹಾಕಿದ್ದಾರೆ. ಇದು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡುವುದು ನಮ್ಮ ಕರ್ತವ್ಯ ಅದನ್ನು ಮಾಡುತ್ತೇವೆ. ಬಿಜೆಪಿ ಅವರು ನಮ್ಮ ವಿರುದ್ಧ ಇಂತಹ ನೂರಾರು ಪೋಸ್ಟರ್ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಇದು ಅಧಿಕಾರ ದುರ್ಬಳಕೆಯೇ ಎಂದು ಕೇಳಿದ ಪ್ರಶ್ನೆಗೆ, ‘ಇದು ಅಧಿಕಾರ ದುರ್ಬಳಕೆ, ಭಯ, ದ್ವೇಷದ ರಾಜಕಾರಣವಾಗಿದೆ. 40% ಕಮಿಷನ್ ಆರೋಪ ನಾವು ಮಾಡಿದ್ದೇವಾ? ಸಿಎಂ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ನಾವು ಹೇಳಿದ್ದೇವಾ? ನಿಮ್ಮ ಶಾಸಕ ಯತ್ನಾಳ್ ಅವರೇ ಹೇಳಿದ್ದಾರೆ. ಹಗರಣದ ಬಗ್ಗೆ ಮಾತನಾಡಿದ ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಮನ್ಸ್ ನೀಡುವ ಸರ್ಕಾರ ಯತ್ನಾಳ್, ವಿಶ್ವನಾಥ್, ಮಠದ ಸ್ವಾಮೀಜಿಗಳಿಗೆ ಸಮನ್ಸ್ ನೀಡಿಲ್ಲ ಯಾಕೆ? ವಿಧಾನಸೌಧದ ಮುಂದೆ ಗುತ್ತಿಗೆದಾರರ ಸಂಘದವರು ಆರೋಪ ಮಾಡಿದಾಗ ಯಾಕೆ ಕೇಸ್ ಹಾಕಲಿಲ್ಲ. ಈ ವಿಚಾರ ಜನರ ಬಾಯಲ್ಲಿ ಹರಿದಾಡುತ್ತಿದೆ. ನೀವು ನಮ್ಮ ಮೇಲೂ ಆರೋಪ ಮಾಡಿದ್ದೀರಿ. ತನಿಖೆ ಮಾಡಿ, ನಾವು ಅದನ್ನು ಸ್ವಾಗತಿಸುತ್ತೇವೆ’ ಎಂದು ತಿಳಿಸಿದರು.

ಕಾಂಗ್ರೆಸ್ ಬಟಾಬಯಲು ಆಗುತ್ತದೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಏನು ಬೇಕಾದರೂ ಮಾಡಲಿ. ಬೇಡ ಎಂದವರು ಯಾರು?’ ಎಂದರು. ಈ ಬಗ್ಗೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೀರಾ ಎಂದು ಕೇಳಿದಾಗ, ‘40% ಕಮಿಷನ್ ವಿಚಾರದ ಚರ್ಚೆಗೆ ಗೊತ್ತುವಳಿ ನಿರ್ಣಯ ಮಂಡಿಸಿದ್ದು ಅಲ್ಲಿಯೂ ನಮ್ಮ ಶಾಸಕಾಂಗ ಪಕ್ಷದ ನಾಯಕರು ಹೋರಾಟ ಮಾಡಲಿದ್ದಾರೆ ‘ ಎಂದರು.

ಕಾಂಗ್ರೆಸ್ ಕಾರ್ಯಕರ್ತರ ಬಂಧನದ ಬಗ್ಗೆ ಕೇಳಿದಾಗ, ‘ 7-8 ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದು, ಅವರನ್ನು ನೋಡಿ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ. ನಮ್ಮ ವಿರುದ್ಧ ಪ್ರಕರಣ ದಾಖಲಿಸಲು ಹೇಳಿದ್ದೇವೆ. 100 ಕೇಸ್ ಗಳ ನಂತರ ಇದು 101ನೆ ಕೇಸ್ ಆಗಲಿ. ಸಂಬಂಧ ಇಲ್ಲದವರನ್ನು ಬಂಧಿಸಿ ಕರೆ ತಂದು ಅವರನ್ನು ನಾಯಕರನ್ನಾಗಿ ಮಾಡುತ್ತಿದ್ದಾರ, ಮಾಡಲಿ ‘ ಎಂದು ತಿಳಿಸಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT