ಕನಕಪುರ: ಒಕ್ಕಲಿಗರ ಪ್ರಾಬಲ್ಯ ಇರುವ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇದೇ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.
ವಿಧಾನಸಭಾ ಚುನಾವಣಾ ರಣಕಣ ಹತ್ತಿರವಾಗುತ್ತಿದೆ, ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್ ಬಿಜೆಪಿ ಎರಡು ಪಕ್ಷಗಳಲ್ಲಿ ಅಭ್ಯರ್ಥಿ ಘೋಷಣೆಯಾಗದೇ ಇರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಎದುರಾಳಿ ಯಾರು ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿಸಿದೆ,
ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಭಾನುವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಕುರಿತು ಚರ್ಚೆ ನಡೆದಿದೆ. ಅಚ್ಚರಿ ಬೆಳವಣಿಗೆಯಲ್ಲಿ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ ಅವರನ್ನು ಕಣಕ್ಕೆ ಇಳಿಸಲು ಪಕ್ಷ ಆಸಕ್ತಿ ತೋರಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಧಿಕಾರದ ಹಪಾಹಪಿ: ಆಕಾಂಕ್ಷಿಗಳಿಂದ ಮುಂದುವರಿದ ಪಕ್ಷಾಂತರ ಪರ್ವ; ಮೂರು ಪಕ್ಷಗಳಿಗೂ ಹಾರಿ ನೆಗೆದ 'ಜಂಪಿಂಗ್ ಸ್ಟಾರ್ಸ್'!
ಚನ್ನಪಟ್ಟಣ ವಿರೂಪಸಂದ್ರದವರಾದ ಅಪ್ಪಾಜಿಗೌಡ ವೃತ್ತಿಯಲ್ಲಿ ವೈದ್ಯರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಳೆದ ಬಾರಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದರು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿರುವ ಅಪ್ಪಾಜಿಗೌಡ ರಾಮನಗರ, ಚನ್ನಪಟ್ಟಣ, ಕನಕಪುರ ಸೇರಿದಂತೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಠರನ್ನು ಕೋರಿದ್ದರು.
ಕನಕಪುರದಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಂದಿನಿಗೌಡ ಸ್ಪರ್ಧಿಸಿದ್ದು, ಠೇವಣಿ ಕಳೆದುಕೊಂಡಿದ್ದರು. ಈ ಬಾರಿ ಇಲ್ಲಿಂದ ಯಾವುದೇ ಪ್ರಬಲ ಟಿಕೆಟ್ ಆಕಾಂಕ್ಷಿಗಳು ಕಮಲ ಪಾಳಯದಲ್ಲಿ ಇಲ್ಲ. ಇಂತಹ ಹೊತ್ತಿನಲ್ಲಿ ಅಪ್ಪಾಜಿಗೌಡ ಹೆಸರು ಮುನ್ನಲೆಗೆ ಬಂದಿರುವುದು ಕುತೂಹಲ ಕೆರಳಿಸಿದೆ.
ತಾಲೂಕಿನಲ್ಲಿ ಬಿಜೆಪಿಯಲ್ಲಿ ಬಣಗಳು ಇದ್ದರೂ, ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿಲ್ಲ. ಬೂತ್ ಅಭಿಯಾನ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಗಳ ಮೂಲಕ ಸಕ್ರಿಯವಾಗಿ ಪಕ್ಷ ಸಂಘಟನೆ ಮಾಡಿ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಬಲ ಪಡಿಸಿದ್ದಾರೆ.
ಇದನ್ನೂ ಓದಿ: ಬಗೆಹರಿಯದ ದಳಪತಿಗಳ ಕುಟುಂಬ ಕಲಹ: ದೇವೇಗೌಡರ ಮನೆಯಲ್ಲಿ ಸಂಧಾನಸಭೆ; ಅಸಮಾಧಾನದಿಂದ ಅರ್ಧಕ್ಕೆ ಹೊರ ನಡೆದ ಭವಾನಿ ರೇವಣ್ಣ?
ಸಾತನೂರು ವಿಧಾನಸಭಾ ಕ್ಷೇತ್ರ 2008ರಲ್ಲಿ ವಿಲೀನವಾದ ನಂತರ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧೆಗಿಳಿದ ಧೂಂತೂರು ವಿಶ್ವನಾಥ್ ಕೇವಲ 7 ಸಾವಿರ ಮತಗಳ ಅಂತರದಲ್ಲಿ ಸೋಲೊಪ್ಪಿಕೊಂಡರು. 2013ರಲ್ಲಿ ಡಿಕೆಶಿ ವಿರುದ್ಧ ಪಿಜಿಆರ್ ಸಿಂಧ್ಯಾ ಸೋತಿದ್ದರು. ಕಳೆದ ನಾಲ್ಕು ದಶಕಗಳಿಂದಲೂ ತಾಲೂಕಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನೇರ ಸ್ಪರ್ಧೆ ನಡೆದಿದೆ.
ಡಿಕೆಶಿಗೆ ಜೆಡಿಎಸ್‌ನಿಂದ ಪ್ರಬಲ ಸ್ಪರ್ಧಿಯಾಗಿದ್ದ ಧೂಂತೂರು ವಿಶ್ವನಾಥ್, ಪಕ್ಷದ ಆಂತರಿಕ ವಿಚಾರಗಳಿಗೆ ವರಿಷ್ಠರ ವಿರುದ್ಧ ಮುನಿಸಿಕೊಂಡ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಈ ಅವಕಾಶವನ್ನು ಬಳಸಿಕೊಂಡ ಡಿ.ಕೆ. ಶಿವಕುಮಾರ್ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಧೂಂತೂರು ವಿಶ್ವನಾಥ್ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡು ಕ್ಷೇತ್ರದಲ್ಲಿ ತನ್ನ ವಿರುದ್ಧ ಸ್ಪರ್ಧಿಸಲು ಪ್ರಬಲ ಎದುರಾಳಿಗಳೇ ಇಲ್ಲದಂತೆ ಮಾಡಿಕೊಂಡಿದ್ದಾರೆ.