ರಾಜಕೀಯ

ಕರ್ನಾಟಕ ವಿಧಾನಸಭೆ ಚುನಾವಣೆ: 28 ಅಭ್ಯರ್ಥಿಗಳಿರುವ 3ನೇ ಪಟ್ಟಿ ಪ್ರಕಟಿಸಿದ ಎಎಪಿ

Ramyashree GN

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಎಎಪಿಯ ಕರ್ನಾಟಕ ಘಟಕವು ಸೋಮವಾರ ಪ್ರಕಟಿಸಿದೆ.

ಈ ಪಟ್ಟಿಯಲ್ಲಿ 28 ಹೆಸರುಗಳಿವೆ ಮತ್ತು ಎಲ್ಲಾ ಅಭ್ಯರ್ಥಿಗಳು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಇಲ್ಲಿಯವರೆಗೆ ಅತಿ ಹೆಚ್ಚು ಅಭ್ಯರ್ಥಿಗಳನ್ನು ಘೋಷಿಸಿರುವುದು ಮಾತ್ರವಲ್ಲದೆ, 224 ಕ್ಷೇತ್ರಗಳ ಪೈಕಿ 168 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಆಯ್ಕೆಯನ್ನು ಜನರಿಗೆ ನೀಡಿದೆ. ಎಎಪಿ ಎಲ್ಲಾ ಪಕ್ಷಗಳ ಪೈಕಿ ಅತಿ ಹೆಚ್ಚು ರೈತರು, ಯುವಕರು, ಮಹಿಳೆಯರು ಮತ್ತು ವಿದ್ಯಾವಂತ ವೃತ್ತಿಪರರನ್ನು ಹೊಂದಿದೆ ಎಂದು ಪಕ್ಷವು ಹೇಳಿಕೆಯಲ್ಲಿ ಹೇಳಿಕೊಂಡಿದೆ.

ನಮ್ಮ ಅಭ್ಯರ್ಥಿಗಳ ಪ್ರಾಮಾಣಿಕತೆ ಮತ್ತು ಅವರ ಹಣ ಅಥವಾ ಶಕ್ತಿಗಿಂತ ಹೆಚ್ಚಾಗಿ ಸೇವೆ ಮಾಡುವ ಉದ್ದೇಶವೇ ಅವರ ಗೆಲುವನ್ನು ನಿರ್ಧರಿಸಲು ಬಳಸುವ ಮಾನದಂಡವಾಗಿದೆ. ಕರ್ನಾಟಕದ ಜನರು ಅಸ್ತಿತ್ವದಲ್ಲಿರುವ ಮೂರು ಸಾಂಪ್ರದಾಯಿಕ ಪಕ್ಷಗಳಿಂದ ಬೇಸತ್ತಿದ್ದಾರೆ ಮತ್ತು ಪರ್ಯಾಯವನ್ನು ಬಯಸಿದ್ದಾರೆ. ಇದು ಎಎಪಿ ನಿಜವಾದ ಬದಲಾವಣೆಯನ್ನು ನೀಡುತ್ತಿದೆ ಎಂದು ತಿಳಿಸಿದೆ.

ನಮ್ಮ ಅಭ್ಯರ್ಥಿಗಳ ಸರಾಸರಿ ವಯಸ್ಸು 47 ವರ್ಷಗಳು. ಒಟ್ಟು 16 ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಎಂಜಿನಿಯರ್‌ಗಳಿಗೆ ಟಿಕೆಟ್ ನೀಡಲಾಗಿದೆ. ಡಾಕ್ಟರೇಟ್ ಹೊಂದಿರುವ ಅಭ್ಯರ್ಥಿಗಳು ಐದು ಮತ್ತು ಸ್ನಾತಕೋತ್ತರ ಪದವಿ ಹೊಂದಿರುವವರು 41, ಪದವೀಧರರು 82 ಮಂದಿ ಇದ್ದಾರೆ. ನಾವು ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಒಳ್ಳೆಯ ಗುಣ ಮತ್ತು ದೆಹಲಿಯಲ್ಲಿ ನಮ್ಮ ಪಕ್ಷ ಮಾಡಿದ ಮತ್ತು ಪಂಜಾಬ್‌ನಲ್ಲಿ ಮಾಡುತ್ತಿರುವ ಕೆಲಸಗಳ ಮೇಲೆ ಹೋರಾಡುತ್ತೇವೆ ಎಂದು ಹೇಳಿಕೆ ತಿಳಿಸಿದೆ.

ಅದೇ ಜನಪರ ಆಡಳಿತವನ್ನು ನೀಡಲು ನಾವು ಅವಕಾಶವನ್ನು ಬಯಸುತ್ತೇವೆ ಮತ್ತು ಕರ್ನಾಟಕದ ಜನರು ತಮ್ಮ ಬೆಂಬಲ ಮತ್ತು ಮತಗಳೊಂದಿಗೆ ನಮ್ಮ ಅಭ್ಯರ್ಥಿಗಳನ್ನು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಪಕ್ಷದ ಹೇಳಿಕೆಯಲ್ಲಿ ಹೇಳಲಾಗಿದೆ.

ಎಎಪಿಯ ರಾಜ್ಯ ಮಾಧ್ಯಮ ಸಂಯೋಜಕ ಜಗದೀಶ್ ವಿ. ಸದಾಂ ಮಾತನಾಡಿ, 'ಹಳೆಯ ಪಕ್ಷವೆಂದು ಭಾವಿಸಲಾದ ಕಾಂಗ್ರೆಸ್ ಮತ್ತು ವಿಶ್ವದ ಅತಿದೊಡ್ಡ ಪಕ್ಷವೆಂದು ಭಾವಿಸಲಾದ ಬಿಜೆಪಿ ಕರ್ನಾಟಕದಲ್ಲಿ ಎಎಪಿ ಪ್ರವೇಶದ ಬಗ್ಗೆ ಆತಂಕಗೊಂಡಿವೆ. ನಮ್ಮ ಅಭ್ಯರ್ಥಿಗಳಿಗೆ ಬೆದರಿಕೆ ಮತ್ತು ಲಂಚ ನೀಡಲು ಪ್ರಯತ್ನಿಸುವ ಮೂಲಕ ಎಎಪಿಯ ಪ್ರಚಾರವನ್ನು ಹಾನಿ ಮಾಡಲು ತಮ್ಮ ಹಣ ಮತ್ತು ಶಕ್ತಿಯನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

SCROLL FOR NEXT