ರಾಜಕೀಯ

ಬಳ್ಳಾರಿಯ ಎರಡು ಕ್ಷೇತ್ರಗಳಲ್ಲಿ ಶ್ರೀರಾಮಲು ಸ್ಪರ್ಧೆ?

Manjula VN

ಬಳ್ಳಾರಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು, ಬಳ್ಳಾರಿ ಗ್ರಾಮಾಂತರ ಮತ್ತು ಸಂಡೂರು ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಲು ಬಯಸಿದ್ದು, ಇದಕ್ಕಾಗಿ ಬಿಜೆಪಿಯಿಂದ ಎರಡು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಎರಡೂ ಸ್ಥಾನಗಳಿಂದ ಸ್ಪರ್ಧಿಸಲು ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿರುವ ಶ್ರೀರಾಮುಲು ಅವರು, ಹೈಕಮಾಂಡ್‌ನ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

ಬಳ್ಳಾರಿ ಜಿಲ್ಲೆಯ ಪ್ರಬಲ ಸ್ಪರ್ಧಿಗಳಲ್ಲಿ ಶ್ರೀರಾಮುಲು ಒಬ್ಬರಾಗಿದ್ದು, ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಅವರು ಗೆಲುವು ಸಾಧಿಸುವುದು ಖಚಿತ ಎಂದು ಬಳ್ಳಾರಿಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆಯಿಂದಲೇ ಸ್ಪರ್ಧಿಸುವುದಾಗಿ ಶ್ರೀರಾಮುಲು ಈ ಹಿಂದೆ ಹೇಳಿಕೆ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಶ್ರೀರಾಮುಲು ಆಯ್ಕೆಯಾಗಿದ್ದರು.

ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ರೀರಾಮುಲು ಅವರು ಭೇಟಿ ಮಾಡಿದ್ದರು. ಭೇಟಿ ಬಳಿಕ ಹೇಳಿಕೆ ನೀಡಿದ್ದ ಶ್ರೀರಾಮುಲು ಅವರು, ಸಂಡೂರಿನ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ, ಇದಾದ ಕೆಲವು ದಿನಗಳ ನಂತರ ಬಳ್ಳಾರಿ ಗ್ರಾಮಾಂತರ ಭಾಗದಲ್ಲಿ ಪ್ರಚಾರ ಆರಂಭಿಸಿದ್ದರು.

ಸಂಡೂರು ಕ್ಷೇತ್ರದಿಂದ ನಾವು ಗೆಲುವು ಸಾಧಿಸಿಯೇ ಇಲ್ಲ. ಹೀಗಾಗಿ ಈ ಬಾರಿಯ ನಮ್ಮ ಗುರಿ ಸಂಡೂರು ಕ್ಷೇತ್ರವಾಗಿದೆ. ಸಂಡೂರಿನಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಪ್ರಚಾರ ಆರಂಭಿಸಿದ್ದು, ಸಚಿವರ ನಡೆ ಕುರಿತು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡುವಂತೆ ಮಾಡಿದೆ.

SCROLL FOR NEXT