ರಾಜಕೀಯ

ರಾಜ್ಯ ಅಸೆಂಬ್ಲಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಾಗಿ ಮುರುಗೇಶ್ ನಿರಾಣಿ, ಡಾ. ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ

Nagaraja AB

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಅಧಿಸೂಚನೆ ಹೊರಡುವುದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಈ ಮೂಲಕ ರಾಜ್ಯದಲ್ಲಿ ಚುನಾವಣಾ ಕಾವು ತಾರಕ್ಕೇರುತ್ತಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ  ಮರು ಆಯ್ಕೆ ಬಯಸಿ ತಮ್ಮ ತವರು ಕ್ಷೇತ್ರ ಬೀಳಗಿಯಲ್ಲಿ ಸಾಂಕೇತಿಕವಾಗಿ ಗುರುವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಾಗಲಕೋಟೆ ಲೋಕಸಭಾ ಸದಸ್ಯರಾದ   ಪಿ.ಸಿ.ಗದ್ದಿಗೌಡರ್, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಸೇರಿದಂತೆ ಅನೇಕ ಪಕ್ಷದ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಲ್ಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ತಹಸೀಲ್ದಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಇದೇ 19ರಂದು  ನಿರಾಣಿ ಅವರು ಮತ್ತೊಮ್ಮೆ ಅಪಾರ ಸಂಖ್ಯೆಯ ಬೆಂಬಲಿಗರು ಹಾಗೂ ಪ್ರಮುಖರ ಜೊತೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. 

ಮತ್ತೊಂದೆಡೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕುಟುಂಬದವರೊಂದಿಗೆ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಗೆ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಯೇ ಭರವಸೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ನಿಶ್ಚಿತವಾಗಿ ಕಮಲ ಅರಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಾ. ಕೆ. ಸುಧಾಕರ್ ನಾಲ್ಕನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿಸುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದ್ದಾರೆ. 

SCROLL FOR NEXT