ರಾಜಕೀಯ

'ನನಗೆ ಟಿಕೆಟ್ ನಿರಾಕರಿಸಿದರೆ ರಾಜ್ಯದಲ್ಲಿ 20-25 ಸ್ಥಾನಗಳ ಮೇಲೆ ಪರಿಣಾಮ ಬೀರಲಿದೆ: ಬಿಜೆಪಿಗೆ ಶೆಟ್ಟರ್ ಎಚ್ಚರಿಕೆ!

Nagaraja AB

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಬಿಟ್ಟುಕೊಡುವಂತೆ ಬಿಜೆಪಿ ಹೈಕಮಾಂಡ್ ಕೇಳಿದ್ದಕ್ಕೆ ಬಂಡಾಯದ ಧ್ವನಿಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಒಂದು ವೇಳೆ ನನಗೆ ಟಿಕೆಟ್ ನಿರಾಕರಿಸಿದರೆ ಕನಿಷ್ಠ 20 ರಿಂದ 25 ಸ್ಥಾನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕಾಗಿ ಭಾನುವಾರದವರೆಗೂ ಕಾಯುತ್ತೇನೆ. ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.  ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೇರಿದಂತೆ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇನ್ನೂ ಬಿಡುಗಡೆ ಮಾಡಿಲ್ಲ, ನಾಳೆಯವರೆಗೂ ಕಾದು ನಂತರ ಮುಂದಿನ ನಡೆ ನಿರ್ಧರಿಸುತ್ತೇನೆ ಎಂದು ಶೆಟ್ಟರ್ ಹೇಳಿದರು. 

ಪಕ್ಷದ ಹಿರಿಯ ಮುಖಂಡರನ್ನು ಈ ರೀತಿ ನಡೆಸಿಕೊಳ್ಳುವುದರಿಂದ ಬಿಜೆಪಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ಪ್ರಶ್ನಿಸಿದಾಗ, ವರಿಷ್ಠರು ಈ ಬಗ್ಗೆ ಯೋಚಿಸಬೇಕು ಎಂದರು. ಪಕ್ಷ ಯಾವುದೇ ನಕಾರಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು, ನನಗೆ ಟಿಕೆಟ್ ಸಿಗದಿದ್ದರೆ ಒಂದೇ ಕಡೆ ಅಲ್ಲ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಪರಿಣಾಮ ಬೀರಲಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಹೇಳಿದ್ದಾರೆ ಎಂದು ಶೆಟ್ಟರ್ ತಿಳಿಸಿದರು. 

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಹಲವು ಕೌನ್ಸಿಲರ್ ಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ನೋವಾಗಿದೆ. ಆದ್ದರಿಂದ ತಮ್ಮ ರಾಜೀನಾಮೆ ನೀಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪಾಲಿಕೆ ಸದಸ್ಯರ ಅಭಿಪ್ರಾಯಗಳನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಶೆಟ್ಟರ್ ಹೇಳಿದರು. 

ಶೆಟ್ಟರ್ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಬಿಜೆಪಿಯ ಕೆಲವು ಪ್ರಮುಖರು ಹೇಳುತ್ತಿರುವ ಮಾತಿಗೆ ಉತ್ತರಿಸಿದ ಶೆಟ್ಟರ್, ಇಂತಹ ಹೇಳಿಕೆಗಳ ಬಗ್ಗೆ ತಿಳಿದಿದೆ. ಆದರೆ ಫಲಿತಾಂಶ ಬೇಕು ಎಂದರು. ಯುವಕರಿಗಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಹೈಕಮಾಂಡ್ ಕೇಳುತ್ತಿದ್ದಾರೆ. ಆದರೆ, ಏನೇ ಆದರೂ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಾಗಿ ಏಪ್ರಿಲ್ 11 ರಂದು ಶೆಟ್ಟರ್ ಹೇಳಿಕೆ ನೀಡಿದ್ದರು. 

ವಿಧಾನಸಭೆ ಚುನಾವಣೆಗೆ ಬಿಜೆಪಿ ಇದುವರೆಗೆ 212 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಉಳಿದ 12 ಸ್ಥಾನಗಳ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಕರ್ನಾಟಕದ 224 ಸ್ಥಾನಗಳ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು,  ಮೇ 13 ರಂದು ಫಲಿತಾಂಶ ಹೊರಬೀಳಲಿದೆ.

SCROLL FOR NEXT