ರಾಜಕೀಯ

ಬಳ್ಳಾರಿ: ಕಾಂಗ್ರೆಸ್ ಗೆ ಮತ್ತೊಂದು ತಲೆನೋವು; ಬಂಡಾಯದ ಬಾವುಟ ಹಾರಿಸಿದ ಅನಿಲ್ ಲಾಡ್, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

Srinivasamurthy VN

ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಅನಿಲ್ ಲಾಡ್ ಬಂಡಾಯದ ಬಾವುಟ ಹಾರಿಸಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಬಳ್ಳಾರಿಯಲ್ಲಿ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2022 ನವೆಂಬರ್.7 ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಯಾದಾಗ ನಗರ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ, ಕೇವಲ ಆರು ತಿಂಗಳ ಹಿಂದೆ ಬಂದ ನಾರಾ ಭರತ್ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ.

ಅವರಿಗೆ ಯಾವ ಮಾನದಂಡ ಆಧರಿಸಿ ಟಿಕೆಟ್ ನೀಡಲಾಗಿದೆ. ಕಲಘಟಗಿಯಲ್ಲಿ 25 ಸಾವಿರ ಮತಗಳ ಅಂತರದಿಂದ ಪರಾಭವಗೊಂಡ ಸಂತೋಷ್ ಲಾಡ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ 60 ಸಾವಿರ ಮತ ಪಡೆದಿದ್ದ ಮುರಳಿಕೃಷ್ಣ ಅವರಿಗೆ ಟಿಕೆಟ್ ನೀಡದೆ, ಚುನಾವಣೆಯಿಂದ ದೂರ ಉಳಿದಿದ್ದ ಮಾಜಿ ಶಾಸಕ ಬಿ.ಎಂ.ನಾಗರಾಜ್ ಅವರಿಗೆ ನೀಡಲಾಗಿದೆ. ಪಕ್ಷಕ್ಕಾಗಿ ದುಡಿದವರನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದರು.

ಭರತ್ ರೆಡ್ಡಿಗೆ ಯಾವ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ?
ಭರತ್ ರೆಡ್ಡಿ ಕುಕ್ಕರ್ ಕೊಟ್ಟಿದ್ದಾರಂತ, ಅಥವಾ ಸಮೀಕ್ಷೆ ಸೇರಿ ಯಾವ ಆಧಾರದಲ್ಲಿ ನಾರಾ ಭರತ್ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬುವುದನ್ನು ಪಕ್ಷ ಸ್ಪಷ್ಟ ಪಡಿಸಬೇಕು. 2022 ನ.07 ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ವೇಳೆ ಅವರು ನೀವೇ ಅಭ್ಯರ್ಥಿ ಎಂದು ಹೇಳಿದ್ದರು. ಆದರೆ, ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ. ಹೀಗಾಗಿ, ಈ ಚುನಾವಣೆ ನನ್ನ ಭವಿಷ್ಯದ ಪ್ರಶ್ನೆಯಾಗಿದ್ದು, ಜನರ ಅಭಿಪ್ರಾಯ ಮೇಲೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. 

ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸಲಾಗುವುದು. ಕಾಂಗ್ರೆಸ್ ನಿಂದ ಅನ್ಯಾಯವಾದ ಹಿನ್ನೆಲೆ ಚುನಾವಣೆಯಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರಚಾರ ನಡೆಸಲಾಗುವುದು ಎಂದು ಅನಿಲ್ ಲಾಡ್ ಹೇಳಿದರು.

SCROLL FOR NEXT