ರಾಜಕೀಯ

ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧಿಸಿದರೆ ಅವರ ವಿರುದ್ಧ ಕಣಕ್ಕಿಳಿಯಲು ಸಿದ್ಧ: ಸುಮಲತಾ ಅಂಬರೀಶ್

Ramyashree GN

ಮೈಸೂರು: ಚನ್ನಪಟ್ಟಣ ಹೊರತುಪಡಿಸಿ ಮಂಡ್ಯದಿಂದ ಜೆಡಿಎಸ್‌ನ ಹಿರಿಯ ನಾಯಕ ಸ್ಪರ್ಧಿಸಲಿದ್ದಾರೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು, ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎದುರು ಮಂಡ್ಯದಿಂದ  ಕಣಕ್ಕಿಳಿಯುವ ಇಚ್ಛೆಯನ್ನು ಸಂಸದೆ ಸುಮಲತಾ ಅಂಬರೀಶ್ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಚಾಲನೆ ನೀಡಿದ ಸಂದರ್ಭದಲ್ಲಿ ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದರು. ಬಿಜೆಪಿ ಹೈಕಮಾಂಡ್ ನಿರ್ದೇಶನ ನೀಡಿದರೆ ಮಂಡ್ಯದಿಂದ ಸ್ಪರ್ಧಿಸುವುದಾಗಿ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸುಮಲತಾ ಅವರು ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು.

'ಪಕ್ಷದಿಂದ ನನಗೆ ಯಾವುದೇ ನಿರ್ದೇಶನ ಬಂದಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಅವರು ಜೆಡಿಎಸ್ ಅಭ್ಯರ್ಥಿ ಎಂ. ಶ್ರೀನಿವಾಸ್ ಅವರನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಂಡ್ಯದ ಜನರು ಬದಲಾವಣೆ ಬಯಸುತ್ತಿದ್ದಾರೆ' ಎಂದು ಸುಮಲತಾ ಹೇಳಿದರು.

'ಆಶ್ಚರ್ಯಕರ ಫಲಿತಾಂಶ ಇರುತ್ತದೆ. ಮದ್ದೂರು ತಾಲೂಕಿನಲ್ಲಿ ದಿವಂಗತ ನಟ ಎಂ.ಎಚ್. ಅಂಬರೀಶ್ ಅವರ ಸಾವಿರಾರು ಅಭಿಮಾನಿಗಳಿದ್ದಾರೆ. ಅವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಷೇಕ್ ಅಂಬರೀಶ್ ಕೂಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ' ಎಂದು ಹೇಳಿದರು.

ಬಲ್ಲ ಮೂಲಗಳ ಪ್ರಕಾರ, ಬಿಜೆಪಿ ಚನ್ನಪಟ್ಟಣದಿಂದ ಸಿಪಿ ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿದ ನಂತರ ಕುಮಾರಸ್ವಾಮಿ ಅವರನ್ನು ಎರಡನೇ ಕ್ಷೇತ್ರದಲ್ಲೂ (ಮಂಡ್ಯ) ಕಣಕ್ಕಿಳಿಸುವ ಕುರಿತು ಜೆಡಿಎಸ್ ಪಾಳಯದಲ್ಲಿ ಚರ್ಚೆ ಆರಂಭವಾಗಿದೆ. ಜೆಡಿಎಸ್ ಮಂಡ್ಯ ಕ್ಷೇತ್ರದ ಹಾಲಿ ಶಾಸಕ ಎಂ. ಶ್ರೀನಿವಾಸ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕುಮಾರಸ್ವಾಮಿ ಅವರು ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು. ಅವರು ಎರಡೂ ಕ್ಷೇತ್ರಗಳಿಂದ ಗೆದ್ದರೆ, ತಮ್ಮ ರಾಮನಗರ ಕ್ಷೇತ್ರವನ್ನು ತಮ್ಮ ಮಗ ನಿಖಿಲ್‌ಗೆ ತ್ಯಾಗ ಮಾಡಿದ್ದ ಅವರ ಪತ್ನಿ ಅನಿತಾ ಅವರಿಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಬಹುದು ಎಂದು ಮೂಲಗಳು ತಿಳಿಸಿವೆ.

SCROLL FOR NEXT