ರಾಜಕೀಯ

ಬಿಜೆಪಿ ಅಮೆರಿಕ- ರಷ್ಯಾದ ಅಧ್ಯಕ್ಷರನ್ನು ಕರೆತಂದರೂ ಅದು ಜೆಡಿಎಸ್‌ಗೆ ಮುಖ್ಯವಲ್ಲ: ಎಚ್‌ಡಿ ರೇವಣ್ಣ

Ramyashree GN

ಹಾಸನ: ಕರ್ನಾಟಕದಲ್ಲಿ ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಹಾಸನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಭೇಟಿ ನೀಡುತ್ತಿದ್ದಂತೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹಿರಿಯ ಪುತ್ರ ಎಚ್.ಡಿ. ರೇವಣ್ಣ ಮಾತನಾಡಿ, ಬಿಜೆಪಿಯು ಅಮೆರಿಕ ಅಥವಾ ರಷ್ಯಾ ಅಧ್ಯಕ್ಷರನ್ನು ಕರೆತಂದರೂ ಅದು ಜೆಡಿಎಸ್‌ಗೆ ಮುಖ್ಯವಲ್ಲ ಎಂದಿದ್ದಾರೆ.

ಎಚ್.ಡಿ. ದೇವೇಗೌಡರು ಹಾಸನ ಜಿಲ್ಲೆಯವರಾಗಿದ್ದು, ಈ ಪ್ರದೇಶವನ್ನು ಗೌಡ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾಗಿದೆ.

ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನವನ್ನು (ಪ್ರೀತಂ ಗೌಡ) ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಗೌಡರ ಕುಟುಂಬದ ಹಿಡಿತ ಹೊಂದಿದ್ದ ಹಾಸನಕ್ಕೆ ಕಾಲಿಟ್ಟಿದೆ. ಈ ಬಾರಿ ಬಿಜೆಪಿ ವಶದಲ್ಲಿರುವ ಏಕೈಕ ಸ್ಥಾನವನ್ನು ವಶಪಡಿಸಿಕೊಳ್ಳುವುದನ್ನು ದೇವೇಗೌಡರ ಕುಟುಂಬ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.

ಬಿಜೆಪಿ ಶಾಸಕ ಪ್ರೀತಂ ಗೌಡ ಮತ್ತು ಗೌಡ ಕುಟುಂಬ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ.

ಗೌಡರ ಕುಟುಂಬದ ಯಾರನ್ನಾದರೂ ಕಣಕ್ಕಿಳಿಸಿ, ಭಾರಿ ಅಂತರದಿಂದ ಸೋಲಿಸುತ್ತೇನೆ ಎಂದು ಪ್ರೀತಂ ಗೌಡ ಅವರು ಗೌಡರ ಕುಟುಂಬಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ಹಾಸನ ಕ್ಷೇತ್ರದಿಂದ ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಸ್ವರೂಪ್ ಪ್ರಕಾಶ್ ಅವರನ್ನು ಕಣಕ್ಕಿಳಿಸಿದೆ.

ಅಮಿತ್ ಶಾ ಭೇಟಿ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ಡಿ. ರೇವಣ್ಣ, 'ಬಿಜೆಪಿ ಪಕ್ಷ ಅಮೆರಿಕ ಅಥವಾ ರಷ್ಯಾ ಅಧ್ಯಕ್ಷರನ್ನು ಕರೆತಂದರೂ ಕೂಡ ಅದು ಜೆಡಿಎಸ್‌ಗೆ ಮುಖ್ಯವಲ್ಲ. ನಮಗೆ ದೇವೇಗೌಡರು (ಮಾಜಿ ಪ್ರಧಾನಿ) ಮತ್ತು ಕುಮಾರಣ್ಣ (ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ) ಸಾಕು. ಅವರೇ ನಮ್ಮ ಚಾಣಕ್ಯರು' ಎಂದು ಹೇಳಿದರು.

'123 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ಜನ ನೋಡಿದ್ದಾರೆ. ಜೆಡಿಎಸ್‌ಗೆ ಒಮ್ಮೆ ಸಂಪೂರ್ಣ ಬಹುಮತ ನೀಡಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಮೂಲೆಗುಂಪು ಮಾಡಲು ನಿರ್ಧರಿಸಿದ್ದಾರೆ' ಎಂದರು.

'ಹಾಸನದಲ್ಲಿ ನಮ್ಮ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಅವರನ್ನು ಕಣಕ್ಕಿಳಿಸಿದ್ದೇವೆ. ಭವಾನಿ ರೇವಣ್ಣ (ಹಾಸನದ ಆಕಾಂಕ್ಷಿಯಾಗಿದ್ದ ಅವರ ಪತ್ನಿ) ಪಕ್ಷದ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಒಗ್ಗಟ್ಟು ಪ್ರದರ್ಶಿಸಲು ಇನ್ನೇನು ಬೇಕು. ಪಕ್ಷ ಮತ್ತು ಜನರು ಅಭಿವೃದ್ಧಿ ಹೊಂದಬೇಕು ಎಂದು ನಾವು ಬಯಸುತ್ತೇವೆ' ಎಂದು ರೇವಣ್ಣ ಸಮರ್ಥಿಸಿಕೊಂಡರು.

SCROLL FOR NEXT