ರಾಜಕೀಯ

ಪ್ರಚಾರ ವೇಳೆ ಕಲ್ಲು ತೂರಾಟ: ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ತಲೆಗೆ ಗಾಯ

Nagaraja AB

ಕೊರಟಗೆರೆ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಚಾರದ ಕಣ ತಾರಕಕ್ಕೇರಿದ್ದು, ಕೆಲವು ಕಡೆಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅವರ ತಲೆಗೆ ಗಾಯವಾಗಿ ರಕ್ತ ಸೋರಿಕೆಯಾಗಿದೆ.

ತಾಲೂಕಿನ ಭೈರೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಚಾರದ ವೇಳೆಯಲ್ಲಿ  ಡಾ. ಜಿ. ಪರಮೇಶ್ವರ್ ಅವರನ್ನು ಎತ್ತಿಕೊಂಡು ಕಾರ್ಯಕರ್ತರು ಕುಣಿಯುತ್ತಿದ್ದಾಗ ಗುಂಪಿನಲ್ಲಿದ್ದ ದುಷ್ಕರ್ಮಿ ಕಲ್ಲು ತೂರಾಟ ನಡೆಸಿರುವುದಾಗಿ ವರದಿಯಾಗಿದೆ. ಕೂಡಲೇ ಅವರನ್ನು ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಡಾ. ಜಿ.ಪರಮೇಶ್ವರ್ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ವೇಳೆಯಲ್ಲಿ ಉಪ ಮುಖ್ಯಮಂತ್ರಿಯಾಗಿ  ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಜೆಡಿಎಸ್ ನಿಂದ ಸುಧಾಕರ್ ಲಾಲ್ ಸ್ಪರ್ಧಿಸಿದ್ದು, ಕ್ಷೇತ್ರದಲ್ಲಿ ತ್ರಿಕೋನ ಪೈಪೋಟಿ ಏರ್ಪಟ್ಟಿದೆ.

SCROLL FOR NEXT