ರಾಜಕೀಯ

ಗಲಾಟೆ ಆರಂಭಿಸಿದ್ದೇ ಬಿಜೆಪಿ: ಸಿದ್ದರಾಮಯ್ಯ; ಕಾರು-ಬೈಕ್ ಡಿಕ್ಕಿಯಿಂದ ಆದ ಜಗಳಕ್ಕೆ ರಾಜಕೀಯ ಬಣ್ಣ ಎಂದ ಯತೀಂದ್ರ

Sumana Upadhyaya

ರಾಯಚೂರು/ಮೈಸೂರು: ವರುಣಾ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಗಲಾಟೆ ಶುರುಮಾಡಿದ್ದೇ ಬಿಜೆಪಿಯವರು, ಬಿಜೆಪಿ ಪಾಳಯದಲ್ಲಿ ನಮ್ಮ ಪರ ಯಾರೋ ಘೋಷಣೆ ಕೂಗಿದರು. ಅದಕ್ಕೆ ಬಿಜೆಪಿಯವರು ಗಲಾಟೆ ಶುರುಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ರಾಯಚೂರಿನಲ್ಲಿಂದು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆಯಿದೆ, ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಪರ ಜನರ ಒಲವಿದೆ ಇದರಿಂದ ಹತಾಶೆಯಿಂದ ಬಿಜೆಪಿಯವರು ಗಲಾಟೆ ಮಾಡುತ್ತಿದ್ದಾರೆ ಎಂದರು.

ಸೋಮಣ್ಣನವರು ಗಲಾಟೆ ಬಗ್ಗೆ ದೂರು ನೀಡುತ್ತಾರೆಯೇ ನೀಡಲಿ, ನಾವೂ ದೂರು ಕೊಡುತ್ತೇವೆ ಎಂದು ಸಿದ್ದರಾಮಯ್ಯ ಗರಂ ಆಗಿ ಹೇಳಿದರು.

ಇನ್ನು ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮನಹುಂಡಿಯಲ್ಲಿ ಕಾರು-ಬೈಕ್ ಡಿಕ್ಕಿಯಿಂದ ಜಗಳ ನಡೆದಿದೆ. ಬಿಜೆಪಿಯವರು ಇದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಆರೋಪಿಸಿದರು. 

ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ ಆರೋಪ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಗಲಭೆ ಮಾಡಿಸಲು ನಿಸ್ಸೀಮರು. ಎಷ್ಟೇ ಪ್ರಚೋದನೆ ಮಾಡಿದರು ಅವರ ಪ್ರಚೋದನೆಗೆ ಕಾಂಗ್ರೆಸ್ ಕಾರ್ಯಕರ್ತರು ಒಳಗಾಗಬಾರದು. ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಈ ರೀತಿ ಕಾರ್ಯತಂತ್ರ ಮಾಡುತ್ತಿದೆ ಎಂದು ಹರಿಹಾಯ್ದರು.

ಬಿಜೆಪಿ ಹಸಿ ಸುಳ್ಳು ಹೇಳುತ್ತಾ ದ್ವೇಷ ಹುಟ್ಟುಹಾಕಿ ತನ್ನ ಬೇಳೆ ಬೇಯಿಸಿಕೊಳ್ಳುವ ತಂತ್ರ ಮಾಡುತ್ತಿದೆ. ಗಲಾಟೆ ನಡೆದ ವೇಳೆ ಸಿದ್ದರಾಮಯ್ಯ ಕುಟುಂಬದವರು ಯಾರೂ ಅಲ್ಲಿ ಇರಲಿಲ್ಲ. ಆದರೂ ದುರುದ್ದೇಶದಿಂದ ನಮ್ಮ ಕುಟುಂಬದ ಸದಸ್ಯರ ಮೇಲೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.

SCROLL FOR NEXT