ರಾಜಕೀಯ

ಸಿ.ಟಿ ರವಿಗೆ ಹೈಕಮಾಂಡ್ ಬುಲಾವ್: ರಾಜ್ಯಾಧ್ಯಕ್ಷ ಪಟ್ಟ ನೀಡುವ ಸಾಧ್ಯತೆ

Manjula VN

ಬೆಂಗಳೂರು: ಪಕ್ಷದ ಕೇಂದ್ರ ನಾಯಕರ ಆಹ್ವಾನ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಸಿ.ಟಿ ರವಿ ಅವರು ಮಂಗಳವಾರ ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡಿದ್ದು, ಸಿ.ಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ದೆಹಲಿಗೆ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ ಅವರು, ನಾನು ಯಾವುದೇ ಹುದ್ದೆಯನ್ನು ಬಯಸಿಲ್ಲ. 1991ರಲ್ಲಿ ಚಿಕ್ಕಮಗಳೂರು ಯುವ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಬಯಸಿದ್ದೆ. ಆದರೆ ಜಿಲ್ಲಾಧ್ಯಕ್ಷನಾದೆ. 1994ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಕೇಳಿದ್ದೆ. ಆ ಎರಡು ಸಂದರ್ಭಗಳನ್ನು ಹೊರತುಪಡಿಸಿದರೆ, ನಂತರ ನಾನು ಯಾವುದೇ ಹುದ್ದೆಯನ್ನು ಬಯಸಲಿಲ್ಲ ಎಂದು ಹೇಳಿದರು.

ನನಗೆ ಸಹಕಾರ ನೀಡಿದ ಪಕ್ಷದ ಪದಾಧಿಕಾರಿಗಳಿಗೆ ಧನ್ಯವಾದ ಹೇಳಲು ದೆಹಲಿಗೆ ಭೇಟಿ ನೀಡಿದ್ದೇನೆಂದು ತಿಳಿಸಿದರು.

ದೆಹಲಿಗೆ ತೆರಳಿರುವ ರವಿಯವರು, ತಮಿಳುನಾಡಿನ ಮೀನುಗಾರಿಕಾ ಖಾತೆ ರಾಜ್ಯ ಸಚಿವ ಲೋಗನಾಥನ್ ಮುರುಗನ್ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದರು.

ಈ ನಡುವೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನೀಡಲಾಗಿದ್ದ ನಿವಾಸವನ್ನು ರವಿಯವರು ಖಾಲಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟಾಗ ರವಿ ಅವರು, ತಮಿಳುನಾಡಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಯಲ್ಲಿದ್ದರು ಎಂಬುದು ಗಮನಾರ್ಹ ವಿಚಾರವಾಗಿದೆ. ಈ ಬೆಳವಣಿಗೆ ನಡುವಲ್ಲೇ ರವಿಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರತೊಡಗಿವೆ.

ಈಗಾಗಲೇ ಸಿ.ಟಿ.ರವಿಯವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರು ಬೆಂಬಲ ನೀಡಿದ್ದಾರೆಂದು ಎಂದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT