ರಾಜಕೀಯ

ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ವಿರುದ್ಧ 'PayCS' ಫೋಸ್ಟರ್ ಅನಾವರಣ!

Nagaraja AB

ಮಂಡ್ಯ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಲಂಚ ಸ್ವೀಕಾರ ಆರೋಪ ಕುರಿತು ಸಿಐಡಿ ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ಅವರ ವಿರುದ್ಧ PayCS' ಫೋಸ್ಟರ್ ಅನಾವರಣ ಮಾಡಲಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಪೇಸಿಎಂ ಅಭಿಯಾನ ಮಾಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಇದೇ ಮಾದರಿಯ ಫೋಸ್ಟರ್ ಅಂಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿದೆ.

ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಚೆಲುವರಾಯಸ್ವಾಮಿ ಭಾವಚಿತ್ರ ಇದ್ದ ಫ್ಲೆಕ್ಸ್ ಗೆ ಪೇಸಿಎಸ್’ ಪೋಸ್ಟರ್ ಅಂಟಿಸಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯ ಮಧ್ಯಭಾಗದ ಕಲ್ಲುಗಳಿಗೆ ಅಂಟಿಸಿದ ಫೋಸ್ಟರ್ ಗಳನ್ನು ಕಿತ್ತು ಹಾಕಿದ ಪೊಲೀಸರು, ಬಿಜೆಪಿಯವರು ಎನ್ನಲಾದ ಕೆಲವರನ್ನು ಬಂಧಿಸಿದರು. 

ಆದರೆ ಇದು ಜನರ ಅಭಿಯಾನವಾಗಿದ್ದು, ನಾವು ಇದನ್ನು ಮಾಡಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಹೇಳಿಕೊಳ್ಳುವ ಮೂಲಕ ಇದರಿಂದ ಅಂತರ ಕಾಪಾಡಿಕೊಂಡಿವೆ. ಚಲುವರಾಯಸ್ವಾಮಿ ಫೋಟೋದೊಂದಿಗೆ ಕ್ಯೂಆರ್ ಕೋಡ್ ಇರುವ ಅನೇಕ ಫೋಸ್ಟರ್ ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. Pay CS ಆರರಿಂದ 8 ಲಕ್ಷ ರೂಪಾಯಿ ಸ್ವೀಕರಿಸಲಾಗಿದೆ. ಕರ್ನಾಟಕ ಕಾಂಗ್ರೆಸ್ ಗೆ ಚಲುವರಾಯಸ್ವಾಮಿ ಪಾವತಿಸಲು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಫೋಸ್ಟರ್ ನಲ್ಲಿ ಬರೆಯಲಾಗಿದೆ.

ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಇದು ಬಿಜೆಪಿಯ ಪ್ರಚಾರವಲ್ಲ, ಬಿಜೆಪಿ ಕಾರ್ಯಕರ್ತರು ಎನ್ನಲಾದ ಕೆಲ ಯುವಕರನ್ನು ಬಂಧಿಸಲಾಗಿದೆ. ಅವರ ವಿವರ ಇನ್ನೂ ತಿಳಿದುಬಂದಿಲ್ಲ. ಆದರೆ ನಮ್ಮ ಪಕ್ಷದವರು ಇದರಲ್ಲಿ ಭಾಗಿಯಾಗಿಲ್ಲ ಎಂದರು. 

ಸಚಿವರ ವಿರುದ್ಧ ಮಂಡ್ಯದ ಜನ ಸೆಡ್ಡು ಹೊಡೆದಿದ್ದಾರೆ. ಪ್ರಚಾರದಲ್ಲಿ ತಮ್ಮ ಪಕ್ಷದ ಪಾತ್ರವಿಲ್ಲ ಎಂದು ಜೆಡಿಎಸ್ ಮುಖಂಡರೊಬ್ಬರು ಹೇಳಿದ್ದಾರೆ. ಮಂಡ್ಯ ಕಾಂಗ್ರೆಸ್ ಘಟಕದಲ್ಲಿ ಹಲವು ಸಮಸ್ಯೆಗಳಿವೆ. ಇದು ಅವರ ಕೈವಾಡವಿರಬಹುದು ಎಂದು ಅವರು ತಿಳಿಸಿದ್ದಾರೆ. 

ಇತ್ತೀಚಿಗೆ ಕೃಷಿ ಇಲಾಖೆಯ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿತ್ತು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರ ಸೂಚಿಸಿದ್ದರು. ಆದರೆ ರಾಜ್ಯಪಾಲರಿಗೆ ನಕಲಿ ಪತ್ರ ಸಲ್ಲಿಸಲಾಗಿದ್ದ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ಸಿಐಡಿ ತನಿಖೆಗೆ ಆದೇಶಿಸಿದ್ದರು.

ನಕಲಿ ಪತ್ರ ಸೃಷ್ಟಿ ಹಿಂದೆ ಬಿಜೆಪಿ ಮತ್ತು ಅವರ 'ಸಹೋದರ ಹೆಚ್.ಡಿ. ಕುಮಾರಸ್ವಾಮಿ ಕೈವಾಡವಿರಬಹುದೆಂದು ಮುಖ್ಯಮಂತ್ರಿ ಹೇಳಿದ್ದರು. ಚಲುವರಾಯಸ್ವಾಮಿ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ, ನಕಲಿ ಪತ್ರ ಎಂದು ತಿಳಿಸಿದ್ದಾರೆ.

SCROLL FOR NEXT