ರಾಜಕೀಯ

ಯಾವುದೋ ಗಳಿಗೆಯಲ್ಲಿ ಪಕ್ಷ ಬಿಟ್ಟಿದ್ದೆ, ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದಲೇ ಟಿಕೆಟ್‌ ಕೇಳುವೆ: ಎಚ್‌ ವಿಶ್ವನಾಥ್

Ramyashree GN

ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ಕೇಳುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಭಾನುವಾರ ಹೇಳಿದರು. 

ಮೈಸೂರಿನಿಂದ ಲೋಕಸಭೆಗೆ ಸ್ಪರ್ಧಿಸುವಿರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್‌ನಿಂದ ಸಂಸದನಾಗಿದ್ದೇನೆ. 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ರಾಜಕೀಯ ಜೀವನದ ಅತಿ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದ್ದೆ. ಜೆಡಿಎಸ್‌ ಪಕ್ಷದ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ನನ್ನ ಬಾವುಟ ಬದಲಾಗುತ್ತದೆ. ಆದರೆ, ಅಜೆಂಡಾ ಬದಲಾಗುವುದಿಲ್ಲ. ಯಾವುದೋ ಗಳಿಗೆಯಲ್ಲಿ ಕಾಂಗ್ರೆಸ್ ಬಿಟ್ಟಿದ್ದೆ. ಈಗ ಮತ್ತೊಮ್ಮೆ ಏಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಬಾರದು ಎಂದು ಪ್ರಶ್ನಿಸಿದರು.

ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ಈಗ ಪಕ್ಷ ರಾಜಕಾರಣಕ್ಕಿಂತ ವ್ಯಕ್ತಿ ರಾಜಕಾರಣ ನಡೆಯುತ್ತಿದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ಎಚ್‌ಡಿ ದೇವೇಗೌಡ ಕೇಂದ್ರಿತ ರಾಜಕಾರಣ ನಡೆಯುತ್ತಿದೆ. ಇದರಿಂದ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತುಹೋಗಿದೆ. ರಾಜಕಾರಣ ಜಡವಲ್ಲ ಅದು ಜಂಗಮ. ಏನೇನು ಬದಲಾಗುತ್ತದೆಯೋ ನೋಡೋಣ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಒಮ್ಮೆ ಕುಮಾರಸ್ವಾಮಿಯವರ ಹೆಗಲ ಮೇಲೆ ಕೂತು ಅಧಿಕಾರಕ್ಕೆ ಬಂದರೆ ಇನ್ನೊಂದು ಸಲ ನಮ್ಮ ಹೆಗಲ ಮೇಲೆ ಕುಳಿತುಕೊಂಡು ಬಂದಿದೆ. ಇವರ ಆಡಳಿತದಿಂದ ಜನ ಬೇಸತ್ತಿರುವುದರಿಂದ ಬಿಜೆಪಿ ಮತ್ತೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ ಎಂದರು. 

ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯನ್ನು ಈಡೇರಿಸುತ್ತಿದೆ. ಸರ್ಕಾರಕ್ಕೆ ಕೆಲಸ ಮಾಡಲು ಕಾಲಾವಕಾಶ ನೀಡಬೇಕು. ಅದನ್ನು ಬಿಟ್ಟು ಬಿಜೆಪಿ ಹಾಗೂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ನಿರಂತರ ಟೀಕೆ ಮಾಡುವುದರಲ್ಲಿ ಏನೂ ಅರ್ಥವಿಲ್ಲ ಎಂದು ಕಿಡಿಕಾರಿದರು.

SCROLL FOR NEXT