ರಾಜಕೀಯ

ಎಸ್.ಟಿ. ಸೋಮಶೇಖರ್ ಅಸಮಾಧಾನ ತಣಿಸಲು ಬಿಜೆಪಿಯಿಂದ ಇಬ್ಬರು ಮುಖಂಡರ ಉಚ್ಛಾಟನೆ!

Nagaraja AB

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿತ್ತು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದರೂ ನನ್ನನ್ನು ಸೋಲಿಸಲು ಪಕ್ಷದ ಒಳಗಿನವರೇ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ ಎಂದು ಎಸ್. ಟಿ. ಸೋಮಶೇಖರ್ ಆರೋಪಿಸಿದ್ದರು.

ಅಲ್ಲದೇ ಈ ಸಂಬಂಧ ಪಕ್ಷದ ರಾಜ್ಯದ ಘಟಕಕ್ಕೂ ದೂರು ನೀಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಆಲರ್ಟ್ ಆದ ರಾಜ್ಯ ಬಿಜೆಪಿ ನಾಯಕರು ಸೋಮಶೇಖರ್ ಅವರ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಯಶವಂತಪುರ ಬಿಜೆಪಿ ಮಂಡಳ ಮಾಜಿ ಅಧ್ಯಕ್ಷ ಮಾರೇಗೌಡ ಹಾಗೂ ಉಪಾಧ್ಯಕ್ಷ ಧನಂಜಯ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರಿಬ್ಬರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಬಿ. ನಾರಾಯಣ ಆದೇಶ ಹೊರಡಿಸಿದ್ದಾರೆ.  ಇತ್ತೀಚಿಗೆ ಮಾರೇಗೌಡ ಎಸ್.ಟಿ. ಸೋಮಶೇಖರ್ ಅವರ ಭಾವಚಿತ್ರವಿರುವ ಪಕ್ಷದ ಬ್ಯಾನರ್ ಹಾಕಿಕೊಂಡು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಇದಕ್ಕೆ ಎಸ್. ಟಿ. ಸೋಮಶೇಖರ್ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ಅವರ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿ ನಾಯಕರ ವಿರುದ್ಧವೂ ಕಿಡಿಕಾರಿದ್ದರು. 

SCROLL FOR NEXT