ರಾಜಕೀಯ

ಆರೋಪಿ ಸ್ಥಾನದಲ್ಲಿರುವ ಸಚಿವ ಚೆಲುವರಾಯಸ್ವಾಮಿಗೆ ಸಿಐಡಿ ಮಾಹಿತಿ ನೀಡುತ್ತಿದೆ: ಎಚ್‌ಡಿ.ಕುಮಾರಸ್ವಾಮಿ ಆರೋಪ

Manjula VN

ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರು ಮತ್ತೊಂದು ಆರೋಪ ಮಾಡಿದ್ದಾರೆ.

ಕೃಷಿ ಸಚಿವ ಚಲುವಾರಾಯಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕುಮಾರಸ್ವಾಮಿಯವರು, ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹಾಗೂ ಸಚಿವರುಗಳಿಂದ ಅಧಿಕಾರಿಗಳ ಸುಲಿಗೆ ನಡೆಯುತ್ತಿದೆ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ಜರಗನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿಸಚಿವ ಚಲುವಾರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರಿನ ಪತ್ರ ಬರೆದ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಐಡಿ ವಶಕ್ಕೆ ಪಡೆದಿದೆ. ಈ ಮೂಲಕ ಸರ್ಕಾರದಲ್ಲಿ ವರ್ಗಾವಣೆ ದಂಧೆ & ಮಂತ್ರಿಗಳಿಂದ ಅಧಿಕಾರಿಗಳ ಸುಲಿಗೆ ನಡೀತಿದೆ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ಪತ್ರ ನಕಲಿಯೋ ಅಸಲಿಯೋ ಆ ಮಾತು ಹಾಗಿರಲಿ. ಆದರೆ, ಕೃಷಿ ಇಲಾಖೆಯಲ್ಲಿ ಸುಲಿಗೆ ವರ್ಗಾವಣೆ ದಂಧೆ ನಡೆಯುತ್ತಿರುವುದು ಅಸಲಿ ಎನ್ನುವುದು ಗೊತ್ತಾಯಿತಲ್ಲ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರಿಗಳು ದೂರಿನ ಪತ್ರ ಯಾಕೆ ಬರೆದರು? ಅವರು ಮೈಸೂರಿನವರಾದ್ರೂ ಆಗಲಿ ಅಥವಾ ಮಂಡ್ಯದವರಾದರೂ ಆಗಲಿ. ಸತ್ಯ ಏನೆಂಬುದು ಬಯಲಿಗೆ ಬಂತು. ಇಬ್ಬರು ಅಧಿಕಾರಿಗಳನ್ನು ಯಾವು ಕಾರಣಕ್ಕೆ ವಶಕ್ಕೆ ಪಡೆದಿದ್ದಾರೆ? ಅಧಿಕಾರಿಗಳ ಬಂಧನವಾಗಿದೆ ಎಂದರೆ ಭ್ರಷ್ಟಾಚಾರ, ವರ್ಗಾವಣೆ ದಂಧೆ ಆಗಿದೆ ಅಂತಲೇ ಅಲ್ಲವೇ? ಆರೋಪಿ ಸ್ಥಾನದಲ್ಲಿ ಇರುವ ಸಚಿವರೇ ಪ್ರತಿಯೊಂದಕ್ಕೂ ಉತ್ತರ, ಹೇಳಿಕೆ ಕೊಡುತ್ತಿದ್ದಾರೆ. ಸಿಐಡಿ ಪೊಲೀಸರು ತನಿಖೆ ವರದಿಯನ್ನು ಗೃಹ ಸಚಿವರಿಗೆ ಕೊಡುತ್ತಾರೋ ಅಥವಾ ಮುಖ್ಯಮಂತ್ರಿಗೆ ಕೊಡುತ್ತಾರೋ? ಇಲ್ಲವೇ ಆರೋಪಿ ಸ್ಥಾನದಲ್ಲಿರುವ ಸಚಿವರಿಗೆ ಎಲ್ಲಾ ಮಾಹಿತಿಯನ್ನು ಸೋರಿಕೆ ಮಾಡಿತ್ತಾರೋ? ಇದೇನು ತನಿಖೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇನು ಸರ್ಕಾರವಾ? ಇವರ ಮೂಗಿನ ನೇರಕ್ಕೆ, ಅದೂ ವಿದ್ಯುತ್ ವೇಗದಲ್ಲಿ, ಅದೂ ಕೇವಲ ಒಂದೇ ವಾರದಲ್ಲಿ ಸಿಐಡಿ ಪೊಲೀಸರು ಎಲ್ಲವನ್ನೂ ಕಂಡು ಹಿಡಿದಿದ್ದಾರೆ. ಅದಕ್ಕೆ ಪೂರಕವಾಗಿ ಆರೋಪಿ ಸಚಿವರು ಹೇಳಿಕೆ ಕೊಡುತ್ತಿದ್ದಾರೆ. ಇದು ಹಳ್ಳ ಹಿಡಿಯದೇ ಇನ್ನೇನಾಗುತ್ತೆ ಎಂದು ಕಿಡಿಕಾರಿದರು.

ಸರ್ಕಾರದ ಭ್ರಷ್ಟಾಚಾರ ಬಯಲಿಗೆ ತಂದ ಮೈಸೂರು ಅಧಿಕಾರಿಗಳನ್ನು ನಾನು ಅಭಿನಂಧಿಸುತ್ತೇನೆ. ಅವರಿಗೆ ನಾನು ಹೇಳುವುದು ಇಷ್ಟೇ. ಹೇಗೂ ರಾಜ್ಯಪಾಲರಿಗೆ ದೂರಿನ ಪತ್ರ ನೀವೆ ಬರೆದಿದ್ದೀರಿ ಎಂಬುದು ಗೊತ್ತಾಗಿದೆ. ಈಗ ನಡೆದಿದ್ದನ್ನು ಧೈರ್ಯವಾಗಿ ಹೊರಗಡೆ ಹೇಳಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕಷ್ಟಪಟ್ಟು, ಬಡತನದಲ್ಲಿ ಓದಿ ಸರ್ಕಾರಿ ಕೆಲಸಕ್ಕೆ ಬಂದಿದ್ದೀರಿ. ಆರೂವರೆ ಕೋಟಿ ಜನರ ತೆರಿಗೆ ಹಣದಿಂದ ನಿಮಗೆ ಸಂಬಳ ಕೊಡಲಾಗುತ್ತಿದೆ ಎಂಬುದನ್ನು ಮನಗಂಡು ಜನರ ಪರ ಮಾತನಾಡಿ. ಸರ್ಕಾರದಲ್ಲಿ ನಡೆಯುತ್ತಿರುವ ಕುಕೃತ್ಯ ಬಗ್ಗೆ ಸತ್ಯ ಹೇಳಿ. ಇದಕ್ಕೆ ಅಂತಿಮ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಚಲುವರಾಯಸ್ವಾಮಿ ಅವರು ನಿಮ್ಮ ಹೆಸರೇಕೆ ಹೇಳಿದರು? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ನನ್ನದೇ ಚಿಂತೆ ಎಂದರು.

ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರದ ಬಗ್ಗೆ ಮಾತನಾಡಿ, ಪದೆಪದೇ ಪುಟ್ಟರಾಜು ಅವರ ಹೆಸರು ಯಾಕೆ ಹೇಳುತ್ತಿದ್ದಾರೆ? ತಮ್ಮ ತಪ್ಪನ್ನು ಮರೆಮಾಚಿಕೊಳ್ಳಲು. ತಮ್ಮ ಹುಳುಕು ಮುಚ್ಚಿಟ್ಟುಕೊಳ್ಳಲು ಕಾಂಗ್ರೆಸ್ ಇಂತಹ ಕೆಲಸಗಳನ್ನು ಮಾಡುತ್ತಿದೆ. ಮೊದಲು ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡಿ ನೊಡೋಣ. ಆಗ ನಿಮ್ಮ ಯೋಗ್ಯತೆ ಏನೆಂದು ಅರ್ಥವಾಗುತ್ತದೆ ಎಂದು ಸವಾಲು ಹಾಕಿದ್ದಾರೆ.

SCROLL FOR NEXT