ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸೇರಲು ಬಯಸುವ ಪಕ್ಷದ ನಾಯಕರನ್ನು ತಡೆಯದಂತೆ ಬಿಜೆಪಿ ಕರ್ನಾಟಕ ಘಟಕಕ್ಕೆ ಸೂಚಿಸಲಾಗಿದೆ.
ಲೋಕಸಭೆ ಚುನಾವಣೆಗೂ ಮುನ್ನ ‘ಆಪರೇಷನ್ ಹಸ್ತ್’ ಮೂಲಕ ಬಿಜೆಪಿಯ 10ರಿಂದ 15 ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು.
ಮಾಜಿ ಸಚಿವರೂ ಹಾಗೂ ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕತ್ವದ ವಿರುದ್ಧ ಹೆಬ್ಬಾರ್ ಅಸಮಾಧಾನಗೊಂಡಿದ್ದು, ಶೀಘ್ರದಲ್ಲೇ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 2019ರಲ್ಲಿ ಕಾಂಗ್ರೆಸ್‌ನಿಂದ ಆಪರೇಷನ್ ಕಮಲದ ಮೂಲಕ ಇಬ್ಬರೂ ನಾಯಕರು ಬಿಜೆಪಿ ಸೇರಿದ್ದರು.
ಇದನ್ನು ಓದಿ: 'ಆಪರೇಷನ್ ಹಸ್ತ'ಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಸ್ತು! 'ಕೈ'ಹಿಡಿಯಲು ಬಿಜೆಪಿ ಬೆಂಬಲಿಗರು, ನಾಯಕರು ಹಿಂಡು ಹಿಂಡಾಗಿ ಮುಂದು!
ವರುಣಾ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಾಮರಾಜನಗರ ಕ್ಷೇತ್ರದಿಂದ ಸೋತಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರು ಸಹ ಕಾಂಗ್ರೆಸ್‌ಗೆ ಮರಳುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಸೋಮಣ್ಣ ಅವರು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷವು ಈ ಬಗ್ಗೆ ನಿರ್ಧಾರ ಕೈಗೊಂಡ ನಂತರ ಅವರು ಕಾಂಗ್ರೆಸ್ ಸೇರುವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಸೋಮವಾರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಿರಿಯ ಮುಖಂಡರು ಭಾಗವಹಿಸಿದ್ದ ಕೋರ್ ಕಮಿಟಿ ಸಭೆಯಲ್ಲಿ ಕೇಸರಿ ಪಕ್ಷ ತೊರೆಯಲು ಬಯಸುವ ನಾಯಕರನ್ನು ತಡೆಯದಿರುವ ನಿರ್ಧಾರಕ್ಕೆ ಬರಲಾಗಿದೆ.
ಇದನ್ನು ಓದಿ: ಆಪರೇಷನ್ ಹಸ್ತದ ಗುಸುಗುಸು ನಡುವೆಯೇ ಡಿಕೆ ಶಿವಕುಮಾರ್- ಕಟ್ಟಾ ಸುಬ್ರಮಣ್ಯ ನಾಯ್ಡು ಭೇಟಿ: ಬಿಜೆಪಿ ತೆಕ್ಕೆಗೆ ಅಖಂಡ?
ಬಿಜೆಪಿ ಕೇಡರ್ ಆಧಾರಿತ ಪಕ್ಷವಾಗಿದ್ದು, ನಾಯಕರು ಪಕ್ಷ ತೊರೆಯಲು ನಿರ್ಧರಿಸಿದರೆ ಭಯಪಡುವ ಅಗತ್ಯವಿಲ್ಲ ಎಂದು ಕೇಸರಿ ಪಕ್ಷದ ಮುಖಂಡರು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರ ನೇಮಕ ಹಾಗೂ ರಾಜ್ಯಾಧ್ಯಕ್ಷರ ನೇಮಕ ಬಗ್ಗೆ ಹೈಕಮಾಂಡ್‌ಗೆ ಮನವಿ ಸಲ್ಲಿಸಲು ಮುಖಂಡರು ನಿರ್ಧರಿಸಿದ್ದಾರೆ.