ರಾಜಕೀಯ

ಕಾಂಗ್ರೆಸ್ ಸರ್ಕಾರದ ನೂರು ದಿನಗಳ ನೂರೆಂಟು ಕರ್ಮಕಾಂಡ: ಬಿಜೆಪಿ ವ್ಯಂಗ್ಯ

Shilpa D

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ನೂರು ದಿನಗಳಲ್ಲಿ ನೂರೆಂಟು ಕರ್ಮಕಾಂಡಗಳನ್ನು ಮಾಡಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಶತದಿನದ ಸಂಭ್ರಮ ಕುರಿತು ಟ್ವೀಟ್ ಮಾಡಿರುವ  ಬಿಜೆಪಿ, ‘ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನೂರು ದಿನದ ನೂರೆಂಟು ಕರ್ಮಕಾಂಡಗಳು ಇಲ್ಲಿವೆ ನೋಡಿ’ ಎಂದು ವಿಡಿಯೊವೊಂದನ್ನು ಹಂಚಿಕೊಂಡಿದೆ.

‘ಬೆಲೆ ಏರಿಕೆ, ಕಲೆಕ್ಷನ್ ಏಜೆಂಟ್ ರಣದೀಪ್ ಸುರ್ಜೇವಾಲಾ, ಶ್ಯಾಡೋ ಸಿಎಂ ಡಾ.ಯತೀಂದ್ರ ಸಿದ್ದರಾಮಯ್ಯ, ವರ್ಗಾವಣೆ ದಂಧೆ, ರೈತರ ಆತ್ಮಹತ್ಯೆ, ಕಲುಷಿತ ನೀರು, ಕಳಪೆ ಆಹಾರ, ಗುತ್ತಿಗೆದಾರರ ಪ್ರತಿಭಟನೆ, ಉಡುಪಿ ಘಟನೆ, ಸುಳ್ಳು ಸುದ್ದಿ, ಮರಳು ಮಾಫಿಯಾ ಅಬ್ಬಬ್ಬಾ ಒಂದಾ ಎರಡಾ...ಅಸಮರ್ಥ ಸರ್ಕಾರದ ಹಳವಂಡಗಳ ಬೃಹತ್ ಪಟ್ಟಿಯೇ ಇಲ್ಲಿದೆ ನೋಡಿ...’ ಎಂದು ಬರೆದುಕೊಂಡಿದೆ.

ಗ್ಯಾರಂಟಿಗಳ ಪುಂಗಿ ಊದಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಎಡವಿದ್ದೂ ಅಲ್ಲದೆ ಇಂದಿಗೂ ಅವುಗಳನ್ನು ಸರಿಯಾಗಿ ಜಾರಿ ಮಾಡಲಾಗಲಿಲ್ಲ.  ಗ್ಯಾರಂಟಿಗಳ ಅನುಷ್ಠಾನಕ್ಕೂ ಮೊದಲೇ ರಾಜ್ಯದಲ್ಲಿ ಶುರುವಾಗಿದ್ದು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ದರ್ಬಾರ್. ಉನ್ನತ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಅಧಿಕಾರ ಚಲಾಯಿಸಿದ್ದರು. ಈ ಮೂಲಕ ರಾಜ್ಯದ ಬೊಕ್ಕಸದಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಸಂದಾಯವಾದದ್ದು ಎಷ್ಟು ಎಂಬುದನ್ನು ಎಲ್ಲವನ್ನೂ ತಿಳಿದ ಡಿ.ಕೆ ಶಿವಕುಮಾರ್ ಅವರೇ ತಿಳಿಸಬೇಕಷ್ಟೆ ಎಂದಿದೆ.

ಸುರ್ಜೇವಾಲಾ ಅವರು ಗಂಟು ತೆಗೆದುಕೊಂಡು ದೆಹಲಿ ಫ್ಲೈಟ್ ಹತ್ತುತ್ತಿದ್ದಂತೆ, ಅಸಲಿ ಆಟ ಶುರುವಿಟ್ಟುಕೊಂಡಿದ್ದು ಸಿದ್ದರಾಮಯ್ಯ ಸುಪುತ್ರ #ShadowCM ಯತೀಂದ್ರರು... ಒಂದೇ ಹುದ್ದೆಗೆ ನಾಲ್ಕು ಅಧಿಕಾರಿಗಳಿಗೆ ಶಿಫಾರಸ್ಸು ಪತ್ರಗಳನ್ನು ಕೊಟ್ಟು ಮುಖ್ಯಮಂತ್ರಿಗಳ ಆದೇಶ ಪತ್ರಗಳನ್ನು ದುರುಪಯೋಗ ಮಾಡಿಕೊಳ್ಳಲಾಯಿತು. ಕಾಸಿಗಾಗಿ ಪೋಸ್ಟಿಂಗ್ ದಂಧೆ ರಾಜ್ಯದಲ್ಲಿ ಹೊಸ ಅನಧಿಕೃತ ಉದ್ಯಮವನ್ನೇ ಶುರು ಮಾಡಿತು. ಕೊನೆಗೆ ಸಾಂವಿಧಾನಿಕ ಹುದ್ದೆಯನ್ನೇ ಪುತ್ರನಿಗೆ ನೀಡಿ ಸಿದ್ದರಾಮಯ್ಯ ಅವರು ನನಗೂ ಧೃತರಾಷ್ಟ್ರನಿಗೂ ವ್ಯತ್ಯಾಸವಿಲ್ಲವೆಂಬುದನ್ನು ಸಾಬೀತು ಪಡಿಸಿದರು.

ಸೇಡಿನ ರಾಜಕೀಯಕ್ಕಿಳಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಕಿರುಕುಳಕ್ಕೆ ಮನನೊಂದು ಸಾರಿಗೆ ನೌಕರ ಆತ್ಮಹತ್ಯೆ ಯತ್ನ ನಡೆಸಿದ್ದು ಕಲೆಕ್ಷನ್ ಮಾಡಿ ತರದ ಅಧಿಕಾರಿಗಳನ್ನು ನಡೆಸಿಕೊಳ್ಳುವ ರೀತಿಗೆ ಕೈಗನ್ನಡಿ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ಕಾಕಾ ಪಾಟೀಲ್‌ಗೂ ಫ್ರೀ ಮಹಾದೇವಪ್ಪ ನಿಂಗೂ ಫ್ರೀ ಎಂದು ಪುಂಗಿ ಊದಿ ರಾಜ್ಯದ ಜನರ ಕಿವಿ ಮೇಲೆ ಕಂಡೀಷನ್ ಅಪ್ಲೈ ಎನ್ನುವ ಹೂವನ್ನು‌ ಲೀಲಾಜಾಲವಾಗಿ ಇಟ್ಟರು‌.

10 ಕೆಜಿ ಅಕ್ಕಿ ಬೇಕೋ ಬೇಡ್ವಾ ಎಂದಿದ್ದ ಸಿದ್ದರಾಮಯ್ಯರವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಇವರ ಮೋಸ ಜನರಿಗೆ ತಿಳಿಯುತ್ತಿದೆ ಎಂಬ ಸೂಚನೆ ಸಿಗುತ್ತಿದ್ದಂತೆ 15 ಕೆಜಿ ಅಕ್ಕಿಯ ಬದಲಿಗೆ ಕೇಂದ್ರದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ನೀಡುವ 5 ಕೆಜಿ ಅಕ್ಕಿಯೇ ತಮ್ಮದೆಂದು ಬಿಂಬಿಸಿದರು. ಇನ್ನುಳಿದ 5 ಕೆಜಿ ಅಕ್ಕಿಗೆ ಹಣವನ್ನೇ ತಿನ್ನಿ ಎಂದು ಕೈತೊಳೆದುಕೊಂಡರು.

ವಿಪರ್ಯಾಸವೆಂದರೆ ಪ್ರಧಾನಿ ಮೋದಿ ಅವರ ಸರ್ಕಾರದ 5 ಕೆಜಿ ಅಕ್ಕಿಯಲ್ಲಿ ಎರಡು ಕೆಜಿಯನ್ನು #ATMSarkara ವೇ ತಿಂದು ತೇಗಿದೆ. ಫಲಾನುಭವಿಗಳಿಗೆ ಮೂರು ಕೆಜಿ ಅಕ್ಕಿ ನೀಡಿ ಎರಡು ಕೆಜಿ ರಾಗಿ ನೀಡುತ್ತಿದೆ. 5 ಕೆಜಿ ಅಕ್ಕಿಗೆ ಹಣ ಕೊಡುತ್ತೇವೆಂದು ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲವೆಂದು ಇನ್ನೂ ಕಾಗೆ ಹಾರಿಸುತ್ತಲೇ ಇದೆ ಕಾಂಗ್ರೆಸ್..! ಎಂದು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.

SCROLL FOR NEXT