ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿಗೆ ಮತ್ತೆ ಚೈತನ್ಯ ನೀಡುವ ಹಾಗೂ ಮುಂಬರುವ ಲೋಕಸಭಾ ಚುನಾವಣೆಗಾಗಿ ಪಕ್ಷವನ್ನು ಪುನರ್ ಸಂಘಟಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಗರದಲ್ಲಿ ಗುರುವಾರ ಸಭೆ ನಡೆಸಿದ್ದಾರೆ.
ಆದರೆ, ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನಲಾದ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ಮಾಜಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ವಿ. ಸೋಮಣ್ಣ ಹಾಗೂ ರೇಣುಕಾಚಾರ್ಯ ಈ ಸಭೆಯಿಂದ ದೂರ ಉಳಿದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈ ಸಭೆಯಲ್ಲಿ ಮಾತನಾಡಿದ ಬಿ.ಎಲ್. ಸಂತೋಷ್, ಬಿಜೆಪಿಯಿಂದ ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. 10 ಜನ ಹೋದರೂ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು. ನನ್ನ ಜೊತೆ ಕಾಂಗ್ರೆಸ್ ನ 40-45 ಜನ ಸಂಪರ್ಕದಲ್ಲಿದ್ದಾರೆ ವರಿಷ್ಠರು ಒಪ್ಪಿಗೆ ಕೊಟ್ಟರೆ ಒಂದು ದಿನದ ಕೆಲಸ ಅಷ್ಟೆ. ಆದರೆ ನಮಗೆ ಈಗ ಅಗತ್ಯವಿಲ್ಲ. ನಾವು ಈಗ ಸರ್ಕಾರ ಮಾಡಬೇಕಾಗಿಲ್ಲ ಎಂದರು.
ಬಾಂಬೆ ಬಾಯ್ಸ್ ಎಂದು ಕರೆಯಲಾಗುತ್ತಿರುವ, ಅಂದು ನಮ್ಮ ಜೊತೆ ಬಂದವರನ್ನು ನಾವೇ ಹಾಗೆಲ್ಲ ಹೇಳುವುದು ಬೇಡ. ಅವರು ಕಷ್ಟ ಕಾಲಕ್ಕೆ ನಮ್ಮ ಜೊತೆ ಬಂದಿದ್ದಾರೆ. ಅವರು ಹೋಗುತ್ತಾರೆ ಎಂದು ನಾವೇ ಹೇಳುವುದು ಸರಿಯಲ್ಲ. ಹಾಗೆಂದು ಬಿಟ್ಟು ಹೋಗುವವರ ಬಗ್ಗೆ ಚಿಂತೆ ಬೇಡ. ಅಷ್ಟಕ್ಕೂ ಯಾರೂ ಕೂಡಾ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸಂತೋಷ್ ಹೇಳಿದರು.
ಇದನ್ನೂ ಓದಿ: ಕೇಸರಿ ನಾಯಕರಿಗೆ ಬಿಸಿತುಪ್ಪವಾದ ಶೆಟ್ಟರ್: ಬಿಜೆಪಿ ಒಡೆಯಲು ಮಾಜಿ ಸಿಎಂ ಯತ್ನ; ಪ್ರಹ್ಲಾದ್ ಜೋಶಿ ಮೂಲೆಗುಂಪು!
ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನ ನೇಮಕ ಆಗಿಲ್ಲ ಅನ್ನುವ ವಿಚಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನನಗೆ ಅರಿವಿದೆ. ಅದನ್ನೆ ದೊಡ್ಡದು ಮಾಡಿ ಚರ್ಚಿಸುವ ಅಗತ್ಯವೇನು? ಮನೆಯಲ್ಲಿ ಮದುವೆ ಆಗದ ಮಗಳು ಇದ್ದರೆ ಹೊರಹಾಕಲು ಆಗುತ್ತಾ? ಕೆಲಸ ಸಿಗದ ಮಗ ಇದ್ದರೆ ಮನೆಯಿಂದ ಹೊರಹಾಕುತ್ತೀರಾ ಎಂದು ಪ್ರಶ್ನಿಸಿದ ಅವರು, ತಡವಾಗಿದೆ ಎಂಬುದು ಎಷ್ಟು ಸತ್ಯವೋ ನೇಮಕ ಆಗುವುದೂ ಅಷ್ಟೇ ಸತ್ಯ. ಈಗ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಚರ್ಚೆ ಬಿಟ್ಟು ಸಂಘಟನೆಯಲ್ಲಿ ತೊಡಗಿ ಎಂದು ಅವರು ಪಕ್ಷದ ನಾಯಕರಿಗೆ ಸೂಚನೆ ನೀಡಿದರು.