ರಾಜಕೀಯ

ಇಂಡಿಯಾ ಮೈತ್ರಿಕೂಟ ನಮ್ಮಿಂದ ಅಂತರ ಕಾಯ್ದುಕೊಂಡ ಬಳಿಕವೇ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ: ಎಚ್‌ಡಿ ದೇವೇಗೌಡ

Ramyashree GN

ಹಾಸನ: ಕಾಂಗ್ರೆಸ್ ಮತ್ತು ಅದರ ಇಂಡಿಯಾ ಮೈತ್ರಿಕೂಟದ ಪಕ್ಷಗಳು ತಮ್ಮ ಪ್ರಾದೇಶಿಕ ಪಕ್ಷದಿಂದ ಅಂತರ ಕಾಯ್ದುಕೊಂಡ ನಂತರ 2024ರ ಲೋಕಸಭೆ ಚುನಾವಣೆ ಅಂಗವಾಗಿ ಬಿಜೆಪಿಯೊಂದಿಗೆ ತಮ್ಮ ಪಕ್ಷವು ಮೈತ್ರಿ ಮಾಡಿಕೊಂಡಿದೆ ಎಂದು ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸೋಮವಾರ ಹೇಳಿದ್ದಾರೆ.

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಆಗಾಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದು, ಇದು ಪಕ್ಷದವರನ್ನು ಕೆರಳಿಸಿದೆ. ಜೆಡಿಎಸ್ ವಿರುದ್ಧ ಆತುರದ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಗೌಡರು, ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಅವರೇ ಸಂಚು ರೂಪಿಸಿದ್ದರು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಪ್ಪಿಗೆ ನೀಡಿದ ನಂತರವೇ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿದ ನಂತರ ಬಿಜೆಪಿ ಹೈಕಮಾಂಡ್ ಸೀಟು ಹಂಚಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ಮೈತ್ರಿಯ ಗುರಿಯಾಗಿದೆ. ಪಕ್ಷವನ್ನು ಉಳಿಸುವ ಉದ್ದೇಶದಿಂದ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದರು.

ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು, ಕರ್ನಾಟಕದ ನಾಯಕರು ನೀಡಿದ ಹಣದಿಂದಲೇ ನೆರೆಯ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಗೌಡರು ಆರೋಪಿಸಿದ್ದಾರೆ.

SCROLL FOR NEXT